ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು 'ದೋಷಪೂರಿತ' ಮತ್ತು 'ಪೂರ್ವನಿರ್ಧರಿತ' ಕಸರತ್ತು ಎಂದು ಕರೆಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮ ಸುಬ್ರಮಣಿಯನ್ ಅವರನ್ನು ಎನ್‌ಎಚ್‌ಆರ್‌ಸಿಯ ನೂತನ ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ನೇಮಿಸಿದ್ದರು. ಜತೆಗೆ ಇಬ್ಬರು ಸದಸ್ಯರ ನೇಮಕವೂ ಆಗಿತ್ತು.
ಆಯೋಗದ ಅಧ್ಯಕ್ಷ ಸ್ಥಾನದಲ್ಲಿದ್ದ ಅರುಣ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ಜೂನ್ 1ಕ್ಕೆ ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಡಿಸೆಂಬರ್ 18ರಂದು ಸಭೆ ಸೇರಿ ಚರ್ಚಿಸಿತ್ತು. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಖರ್ಗೆ ಮತ್ತು ರಾಹುಲ್ ಅವರು ಎನ್‌ಎಚ್‌ಆರ್‌ಸಿ ಅಧ್ಯಕ್ಷ ಹುದ್ದೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರೋಹಿಂಟನ್ ಎಫ್.ನರೀಮನ್ ಹಾಗೂ ಕೆ.ಎಂ. ಜೋಸೆಫ್ ಅವರ ಹೆಸರನ್ನು ಸೂಚಿಸಿದ್ದರು. ಹಾಗೆಯೇ ಸದಸ್ಯರ ಹುದ್ದೆಗಳಿಗೆ ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಮತ್ತು ಅಕಿಲ್ ಖುರೇಷಿ ಅವರ ಹೆಸರನ್ನು ಸೂಚಿಸಿದ್ದರು.
ಪ್ರಾದೇಶಿಕತೆ, ಸಮಾನತೆಯ ಆಧಾರದ ಮೇಲೆ ಎನ್‌ಎಚ್‌ಆರ್‌ಸಿ ಹುದ್ದೆಗಳಿಗೆ ನೇಮಕ ಮಾಡಬೇಕು. ಡಿ.18ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೆವು. ಇದೀಗ ಕೇಂದ್ರ ಸರ್ಕಾರ ನಮ್ಮ ಅಭಿಪ್ರಾಯಗಳನ್ನು ಕಡೆಗಣಿಸಿ ಬೇರೆಯವರನ್ನು ನೇಮಕ ಮಾಡಿದೆ. ಇದು ಖಂಡನೀಯ ಎಂದು ಕಾಂಗ್ರೆಸ್ ನಾಯಕರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.





