ಜಲಗಾಂವ್: ಜಲಗಾಂವ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ನಂಬಿ ಲಖನೌ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹಲವರು ರೈಲಿನಿಂದ ಕೆಳಗಿಳಿದು ಓಡಿಹೋಗಿದ್ದು, ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
'ರೈಲು ಹಳಿಗಳ ಉದ್ದಕ್ಕೂ ತಲೆಯಿಲ್ಲದ ದೇಹಗಳು ಪತ್ತೆಯಾಗಿವೆ. 13 ಮೃತದೇಹಗಳಲ್ಲಿ ಎಂಟು ಮೃತದೇಹಗಳ ಗುರುತು ಪತ್ತೆಯಾಗಿದೆ' ಎಂದು ವಿಶೇಷ ಪೊಲೀಸ್ ಮಹಾನಿರೀಕ್ಷಕ ದತ್ತಾತ್ರೇಯ ಕರಾಳೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಇಂದು ಭೇಟಿ ನೀಡಲಿದ್ದು, 13 ಜನರ ಸಾವಿಗೆ ಕಾರಣವಾದ ದುರಂತದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಸೆಂಟ್ರಲ್ ಸರ್ಕಲ್‌ನ ಸಿಆರ್‌ಎಸ್ ಮನೋಜ್ ಅರೋರಾ ತಿಳಿಸಿದ್ದಾರೆ.





