ವಾಷಿಂಗ್ಟನ್: ಉಕ್ರೇನ್ ವಿರುದ್ದ ಯುದ್ಧವನ್ನು ಕೊನೆಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬುಧವಾರ ಕರೆ ನೀಡಿದ್ದಾರೆ. ಒಂದು ವೇಳೆ ಯುದ್ದಕ್ಕೆ ಅಂತ್ಯ ಹಾಡದಿದ್ದರೆ, ಅತಿ ಹೆಚ್ಚಿನ ಸುಂಕ ಹಾಗೂ ನಿರ್ಬಂಧಗಳನ್ನು ಎದುರಿಸಬೇಕಾದಿತು ಎಂದೂ ಎಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲೇ ಕದನ ವಿರಾಮ ಒಪ್ಪಂದವಿಲ್ಲದಿದ್ದರೆ, ಉಕ್ರೇನ್ ವಿರುದ್ಧ ಭಾಗಿಯಾಗಿರುವ ರಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಕ್ಕೆ ಬರುವ ಉತ್ಪನ್ನಗಳಿಗೆ ಭಾರಿ ಪ್ರಮಾಣದ ಸುಂಕ ಮತ್ತು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ. ಏಕೆಂದರೆ ಇದರ ಹೊರತುಪಡಿಸಿ ನನಗೆ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ 'ಟ್ರೂತ್ ಸೋಶಿಯಲ್ (Truth Social)ನಲ್ಲಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಟ್ರಂಪ್ ನನಗೆ ರಷ್ಯಾವನ್ನು ನೋಯಿಸಲು ಇಷ್ಟವಿಲ್ಲ. ಏಕೆಂದರೆ ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಹಾಗೂ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಾಗಿಯೂ ಅವರು ಪ್ರತಿಪಾದಿಸಿದ್ದಾರೆ.




