ಚಂಡೀಗಢ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು 101 ರೈತರು ಜನವರಿ 21ರಂದು ಶಂಭು ಗಡಿಯಿಂದ ದೆಹಲಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ ಎಂದು ರೈತ ನಾಯಕ ಸರವಣ ಸಿಂಗ್ ಪಂಢೇರ್ ಗುರುವಾರ ತಿಳಿದರು.
ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ನಾಯಕ ಪಂಢೇರ್, 'ಕಳೆದ 11 ತಿಂಗಳಿಂದ ಶಂಭು ಮತ್ತು ಖನೌರಿಯಲ್ಲಿ ವಾಸ್ತವ್ಯ ಹೂಡಿರುವ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ' ಎಂದು ವಾಗ್ದಾಳಿ ನಡೆಸಿದರು.
'ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾದಿದ್ದೇವೆ. ಆದರೆ, ಸರ್ಕಾರ ಯಾವುದೇ ಮಾತುಕತೆಗೂ ಸಿದ್ಧವಿಲ್ಲ. ಈ ಕಾರಣ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) (ರಾಜಕೀಯೇತರ) ಮತ್ತು ಕೆಎಂಎಂ ನಿರ್ಧರಿಸಿವೆ ಎಂದು ಪಂಢೇರ್ ಹೇಳಿದರು.
ಈ ಹಿಂದೆ 101 ರೈತರನ್ನು ಒಳಗೊಂಡ ತಂಡವು ಡಿ. 6, 8 ಮತ್ತು 14ರಂದು ದೆಹಲಿಗೆ ಪಾದಯಾತ್ರೆ ಮೂಲಕ ಹೋಗಲು ಮೂರು ಬಾರಿ ಪ್ರಯತ್ನಿಸಿತ್ತು. ಆದರೆ, ಹರಿಯಾಣದಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದರು.





