ನವದೆಹಲಿ: ಮೋಟಾರು ವಾಹನಗಳಿಗೆ ಸಂಬಂಧಿಸಿದ ಕಾನೂನಿನ ಈಚಿನ ನಿಯಮಗಳನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು 23 ರಾಜ್ಯಗಳಿಗೆ ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ದೆಹಲಿ ಸರ್ಕಾರಗಳು ವರದಿಯನ್ನು ಸಲ್ಲಿಸಿವೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ವೇಗವಾಗಿ ಸಾಗುವ ವಾಹನಗಳ ಮೇಲೆ ಎಲೆಕ್ಟ್ರಾನಿಕ್ ಉಪಕರಣ ಬಳಸಿ ಕಣ್ಗಾವಲು ಇರಿಸಲು ಅವಕಾಶ ಕಲ್ಪಿಸುವ ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್ 136(ಎ) ಅನುಷ್ಠಾನದ ಬಗ್ಗೆ ಸುಪ್ರೀಂ ಕೋರ್ಟ್ 2024ರ ಸೆಪ್ಟೆಂಬರ್ 2ರಂದು ನಿರ್ದೇಶನಗಳನ್ನು ನೀಡಿತ್ತು.
ಈವರೆಗೆ ವರದಿ ಸಲ್ಲಿಸದೆ ಇರುವ 23 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳು ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಈಗ ಸೂಚಿಸಿದೆ. ಈ ವರದಿಗಳನ್ನು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಸಮಿತಿ ಜೊತೆ ಹಂಚಿಕೊಳ್ಳಲಾಗುತ್ತದೆ.
ಎಲ್ಲ ಆಯಾಮಗಳನ್ನು ಪರಿಶೀಲಿಸಲಿರುವ ಸಮಿತಿಯು ತನ್ನ ಸಲಹೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಎಲೆಕ್ಟ್ರಾನಿಕ್ ಉಪಕರಣ ಬಳಸಿ ಕಣ್ಗಾವಲು ಇರಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸುವಾಗ, ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವಾಗ ಕೇಂದ್ರವು ಈ ಸಲಹೆಗಳನ್ನು ಪರಿಗಣಿಸಬಹುದು ಎಂದು ಪೀಠವು ಹೇಳಿದೆ.




.jpg)
