ಲಾಸ್ ಏಂಜಲೀಸ್: ಲಾಸ್ ಏಂಜಲೀಸ್‌ನಲ್ಲಿ 'ಸಂತಾ ಆನಾ' ಸುಂಟರಗಾಳಿಯು ಎಬ್ಬಿಸಿದ ಕಾಳ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಭಾನುವಾರವೂ ಹರಸಾಹಸಪಟ್ಟರು.
ಕಾಳ್ಗಿಚ್ಚಿನಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ 24 ಮಂದಿ ಮೃತಪಟ್ಟಿದ್ದು, ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ.
ಬುಧವಾರದವರೆಗೆ ಕಾಳ್ಗಿಚ್ಚು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಸಂಸ್ಥೆಯು ರೆಡ್ ಅಲರ್ಟ್ ಘೋಷಿಸಿದೆ.
ಗಾಳಿಯು ಗಂಟೆಗೆ 80 ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಪರ್ವತ ಪ್ರದೇಶದಲ್ಲಿ ಅದರ ವೇಗವು ಗಂಟೆಗೆ 113 ಕಿ.ಮೀ.ನಷ್ಟಿದೆ. ಮಂಗಳವಾರ ಲಾಸ್ ಏಂಜಲೀಸ್ ಜನರ ಪಾಲಿಗೆ ಅತ್ಯಂತ ಅಪಾಯಕಾರಿ ದಿನ ಆಗಿರಲಿದೆ ಎಂದು ಹವಾಮಾನ ತಜ್ಞ ರಿಚ್ ಥಾಮ್ಸನ್ ಹೇಳಿದ್ದಾರೆ.
'70 ಹೆಚ್ಚುವರಿ ನೀರಿನ ಟ್ರಕ್‌ಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸಲು ಸಿಬ್ಬಂದಿಗೆ ನೆರವಾಗುತ್ತಿವೆ' ಎಂದು ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಆಂಥೋನಿ ಸಿ. ಮರ್ರೋನ್ ತಿಳಿಸಿದರು. ಎಂಟು ತಿಂಗಳಿನಿಂದ ಇಲ್ಲಿ ಸರಿಯಾಗಿ ಮಳೆಯಾಗದಿರುವುದರಿಂದ ಬೆಂಕಿಯು ವ್ಯಾಪಕವಾಗಿ ಹರಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
16 ಮಂದಿ ನಾಪತ್ತೆ:
ಪ್ಯಾಲಿಸೇಡ್ಸ್‌ನಲ್ಲಿ 8 ಮಂದಿ ಮತ್ತು ಈಟನ್ ಫೈರ್‌ನಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಶ್ವಾನ ದಳಗಳು ಅವಶೇಷಗಳಡಿಯಲ್ಲಿ ಶೋಧ ನಡೆಸುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕನಿಷ್ಠ 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಳ್ಗಿಚ್ಚಿನಿಂದ ಈವರೆಗೆ ಮೃತಪಟ್ಟವರು- 24 (ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ)
ಮಂಗಳವಾರದಿಂದ ಈವರೆಗೆ ಅಗ್ನಿಗೆ ಆಹುತಿಯಾದ ಕಟ್ಟಡಗಳು- 12,000
ಕಾಳ್ಗಿಚ್ಚಿನಿಂದ ಉಂಟಾಗಿರುವ ಅಂದಾಜು ಆರ್ಥಿಕ ನಷ್ಟ- 11.69 ಲಕ್ಷ ಕೋಟಿ-12.99 ಲಕ್ಷ ಕೋಟಿ (135 -150 ಬಿಲಿಯನ್ ಡಾಲರ್)
ಶಾಲೆಗಳೂ ಅಗ್ನಿಗೆ ಆಹುತಿ
ಲಾಸ್ ಏಂಜಲೀಸ್‌ನಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚಿನಿಂದಾಗಿ ಇಲ್ಲಿನ ಮಕ್ಕಳು ಶಾಲೆಗೆ ಹೋಗಿ ಶಿಕ್ಷಣ ಪಡೆಯುವುದು ಸದ್ಯದ ಮಟ್ಟಿಗೆ ದುಸ್ಥರವಾಗಿದೆ. ಸುಂಟರಗಾಳಿಯು ಎಬ್ಬಿಸಿದ ಕಾಳ್ಗಿಚ್ಚು ಜನರ ಜೀವ ಅವರ ಮನೆಗಳನ್ನು ಮಾತ್ರವಲ್ಲದೆ ಸಂರಕ್ಷಿತ ನೈಸರ್ಗಿಕ ಮತ್ತು ಶೈಕ್ಷಣಿಕ ಪ್ರದೇಶಗಳನ್ನೂ ಆಹುತಿ ತೆಗೆದುಕೊಂಡಿದೆ. ಖಾಸಗಿ ಸಾರ್ವಜನಿಕ ನಿಸರ್ಗ ಆಧಾರಿತ ಪ್ರಿ-ಸ್ಕೂಲ್ ಹೋಂ ಸ್ಕೂಲ್ ಬೇಸಿಗೆ ಶಿಬಿರಗಳು ಎಲ್ಲವನ್ನೂ ಸುಟ್ಟು ಕರಕಲಾಗಿಸಿದೆ. ಲಾಸ್ ಏಂಜಲೀಸ್ ಸ್ಯಾನ್ ಬರ್ನಾಡಿಯೊ ರಿವರ್‌ಸೈಡ್ ವೆನ್‌ಚುರಾ ಮತ್ತು ಸ್ಯಾನ್ ಡಿಯಾಗೊ ಕೌಂಟಿಗಳಲ್ಲಿನ 335 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಕ್ಯಾಲಿಫೋರ್ನಿಯಾ ಶಿಕ್ಷಣ ಇಲಾಖೆ ಬುಧವಾರ ತಿಳಿಸಿತ್ತು.





