ಕೋಲ್ಕತ್ತ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪದ್ಮಪುಕಾರ್ ರೈಲು ನಿಲ್ದಾಣದ ಸಮೀಪ ಸರಕು ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಎರಡು ಬೋಗಿಗಳು ಹಳಿ ತಪ್ಪಿವೆ. ಹಳಿ ತಪ್ಪಿದ ಬೋಗಿಗಳು ಖಾಲಿ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಆಗ್ನೇಯ ರೈಲ್ವೆ ಹೇಳಿದೆ.
ಸರಕು ರೈಲು ಡಿಕ್ಕಿಯಾಗಿದ್ದರಿಂದ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಹಳಿ ತಪ್ಪಿರುವ ಬೋಗಿಗಳನ್ನು ಶಾಲಿಮರ್‌ನಲ್ಲಿರುವ ಬೋಗಿ ಯಾರ್ಡ್‌ಗೆ ಸಾಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಘಟನೆಗೆ ಕಾರಣ ಏನು ಎನ್ನುವುದರ ಪತ್ತೆಗೆ ತನಿಖೆ ಮಾಡಲಾಗುವುದು. ಸರಕು ರೈಲು ಹೇಗೆ ಆ ಹಳಿಗೆ ಬಂತು? ಲೋಕೊ ಪೈಲಟ್ ಸಿಗ್ನಲ್ ನಿರ್ಲಕ್ಷಿಸಿದ್ದಾರೆಯೆ? ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದೊಂದು ಸಣ್ಣ ಘಟನೆಯಾಗಿದ್ದು, ಶಾಲಿಮರ್-ಸಂತ್ರಗಜ್ಜಿ ಮಾರ್ಗದಲ್ಲಿ ಸುಮಾರು 20 ನಿಮಿಷಗಳ ಕಾಲ ರೈಲು ಸೇವೆ ವ್ಯತ್ಯಯವಾಗಿತ್ತು' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾಗಿ ಹಳಿಯನ್ನು ತೆರವುಗೊಳಿಸಲಾಯಿತು. ರೈಲು ಸೇವೆ ಪುನಾರಂಭವಾಯಿತು' ಎಂದು ಅವರು ತಿಳಿಸಿದ್ದಾರೆ.




