ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಆದ ಬದಲಾವಣೆ ಬಗ್ಗೆ ವಿವರಿಸಿದ ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉತ್ತಮ ಆಡಳಿತವು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಮೂಲಮಂತ್ರವಾಗಿದೆ ಎಂದರು.
ಶಾಂತಿ ಮತ್ತು ಸಮಾನತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ.
ಯಾವುದೇ ವಿಭಜಕ ಶಕ್ತಿಗಳಿಂದ ಯುವ ಜನರ ಕನಸುಗಳನ್ನು ಚೂರಾಗಿಸಲು ಸಾಧ್ಯವಿಲ್ಲ ಎಂದರು.
76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 'ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಯಶಸ್ಸು ಕಂಡಿದೆ. ಅದರ ಕೊಡುಗೆ ನಾಗರಿಕರಿಗೆ ಸಲ್ಲಬೇಕು ಎಂದರು. ಜನ ಈಗ ಸರ್ಕಾರವನ್ನು ಹೊಸ ನಿರೀಕ್ಷೆಗಳೊಂದಿಗೆ ನೋಡುತ್ತಿದ್ದಾರೆ. ಉದ್ಯೋಗ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರ್ಥಿಕ ಪ್ರಗತಿಯನ್ನು ಬಯಸುತ್ತಿದ್ದಾರೆ' ಎಂದರು.
'ವಿವಿಧತೆಯಲ್ಲಿ ಏಕತೆಗೆ ಜಮ್ಮು ಮತ್ತು ಕಾಶ್ಮೀರ ಸದಾ ನೆಲೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣುತ್ತಿದೆ. ಈ ನಡುವೆ ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ' ಎಂದು ಹೇಳಿದರು.




