ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ 10 ವರ್ಷಗಳಿಂದ ಬಿಜೆಪಿಯ ದ್ವೇಷಪೂರಿತ ಕಾರ್ಯಸೂಚಿಯು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಸರ್ವಾಧಿಕಾರಿ ಆಡಳಿತದಿಂದ ಪವಿತ್ರ ಸಂವಿಧಾನದ ತತ್ವಗಳನ್ನು ಚೂರುಚೂರು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿನ ಹಿಂದುಳಿದ ಯುವಕರನ್ನು ರಾಷ್ಟ್ರೀಯತೆ ಮತ್ತು ಧಾರ್ಮಿಕ ಪಾರಮ್ಯದ ಧ್ವಜವನ್ನು ಹಿಡಿಯುವಂತೆ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ ಹುಸಿ ರಾಷ್ಟ್ರೀಯತೆಯನ್ನು ಅಭ್ಯಾಸ ಮಾಡಿಸುತ್ತಿದೆ. ಆದರೆ, ಅವರಿಗೆ ಉದ್ಯೋಗವನ್ನು ನೀಡಲು ಏನನ್ನೂ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ಸರ್ಕಾರದ ದಬ್ಬಾಳಿಕೆಯ ಪ್ರವೃತ್ತಿಯಿಂದಾಗಿ ಸಂಸತ್ತಿನ ಕಾರ್ಯಚಟುವಟಿಕೆಯು ಭಾರಿ ಹಿನ್ನಡೆಯನ್ನು ಕಂಡಿದೆ. ಮಾಧ್ಯಮಗಳ ಬಹುಪಾಲು ಭಾಗವನ್ನು ಆಡಳಿತ ಪಕ್ಷದ ಪ್ರಚಾರದ ಸಾಧನವಾಗಿ ಪರಿವರ್ತಿಸಲಾಗಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ದೇಶಕ್ಕೆ ಸಂದೇಶ ನೀಡಿರುವ ಖರ್ಗೆ, 'ಸಂವಿಧಾನದ ವಿಚಾರಗಳು ಮತ್ತು ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸಲು ಇದು ಸುಸಮಯವಾಗಿದೆ. ನಮ್ಮ ಸಂಸ್ಥಾಪಕರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಎತ್ತಿಹಿಡಿಯುತ್ತೇವೆ. ಸಂವಿಧಾನವನ್ನು ರಕ್ಷಿಸಲು ಎಲ್ಲಾ ರೀತಿಯ ತ್ಯಾಗಕ್ಕೆ ಸಿದ್ಧರಾಗಿರಿ' ಎಂದು ಹೇಳಿದ್ದಾರೆ.




