ನವದೆಹಲಿ: ಜನವರಿ ಆರಂಭದಿಂದ 17ರ ವರೆಗೆ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಒಟ್ಟು ₹44,396 ಕೋಟಿಯನ್ನು ಹಿಂಪಡೆದಿದ್ದಾರೆ.
ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ. ಅಮೆರಿಕದ ಬಾಂಡ್ ಗಳಿಕೆಯಲ್ಲೂ ಹೆಚ್ಚಳವಾಗಿದೆ. ಇದು ವಿದೇಶಿ ಬಂಡವಾಳದ ಹೊರಹರಿವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ₹15,446 ಕೋಟಿ ಬಂಡವಾಳ ಹೂಡಿಕೆಯಾಗಿತ್ತು.
'ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಗಳ ನಿವ್ವಳ ಲಾಭದ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿಲ್ಲ. ದೇಶದ ಆರ್ಥಿಕ ಬೆಳವಣಿಗೆ ದರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆಯುತ್ತಿದ್ದಾರೆ' ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.




