HEALTH TIPS

ಲಿವರ್ ಪುನರುಜ್ಜೀವನ, ಚಿಕಿತ್ಸೆಗೆ ಬಂತು ಹೊಸ ಯಂತ್ರ

ಯಕೃತ್ ಎಂದರೆ ಅಷ್ಟು ಸುಲಭವಾಗಿ ಅರ್ಥವಾಗದು. ಅದೇ ಲಿವರ್ ಎಂದ ಕೂಡಲೇ ಎಲ್ಲರ ಕಿವಿಗಳು ನೆಟ್ಟಗಾಗಿಬಿಡುತ್ತವೆ. ಮನುಷ್ಯನ ದೇಹದಲ್ಲಿರುವ ಬಹುಮುಖ್ಯವಾದ ಅಂಗಾಂಗಗಳ ಸಮರ್ಪಕ ನಿರ್ವಹಣೆಯ ಜತೆಗೆ ಆತನನ್ನು ಆರೋಗ್ಯದಾಯಕವಾಗಿ ಇರಿಸಲು, ಅಂದಾಜು 1.5 ಕಿಲೋ ತೂಕದ, ಕಿಬ್ಬೊಟ್ಟೆಯ ಬಲ ಮೇಲ್ಭಾಗದಲ್ಲಿರುವ ಲಿವರ್ ಸದ್ದಿಲ್ಲದೆ 500ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ.

ಶೇ. 70ರಷ್ಟು ಹೆಚ್ಚಿನ ಯಕೃತ್ ಮನುಷ್ಯರ ಆರೋಗ್ಯಕರ ಜೀವನಕ್ಕೆ ಅಗತ್ಯ ವಾಗಿರುವುದಕ್ಕಿಂತಲೂ ಶೇ.70 ಹೆಚ್ಚುವರಿ ಗಾತ್ರದ ಲಿವರ್ ಅನ್ನು ಪ್ರಕೃತಿ ಒದಗಿಸಿ ಕೊಟ್ಟಿದೆ. ಇಂಥ ಲಿವರ್​ಗೆ ಸಣ್ಣಪುಟ್ಟ ಹಾನಿಯಾದಲ್ಲಿ, ಮನುಷ್ಯರ ಆರೋಗ್ಯದಲ್ಲಿ ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ. ಆದರೆ, ಈ ಅಂಗಕ್ಕೆ ಶೇ.70ಕ್ಕಿಂತ ಹೆಚ್ಚಿನ ಹಾನಿಯಾದಲ್ಲಿ ವ್ಯಕ್ತಿಯ ಜೀವಕ್ಕೆ ಸಂಚಕಾರ ಒದಗಿತೆಂದೇ ಅರ್ಥ.

ಮಂದಗತಿಯ ಲಿವರ್ ಕಾಯಿಲೆ

ಯಕೃತ್​ನಲ್ಲಿ ಮಂದಗತಿಯ ಹಾನಿ ಕಾಣಿಸಿಕೊಂಡಾಗ, ಅದನ್ನು ಮಂದಗತಿಯ ಲಿವರ್ ಕಾಯಿಲೆ (ಸಿಎಲ್​ಡಿ) ಅಥವಾ ಸಿರೋಸಿಸ್ (ಲಿವರ್ ಡ್ಯಾಮೇಜ್) ಎಂದು ಕರೆಯಲಾಗುತ್ತದೆ. ಮದ್ಯವ್ಯಸನಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದರಿಂದ ಅಂಗಾಂಶಗಳು ಹಾನಿಯಾಗಿ, ಲಿವರ್​ನಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿ, ಗ್ಯಾಸ್ಟ್ರೋ ಇಂಟಸ್ಟೈನಲ್ ಬ್ಲೀಡಿಂಗ್​ನಂತಹ ಸಮಸ್ಯೆಗಳು ಉಂಟಾಗಿ, ಅಂಗವು ಕೊಳೆಯಲಾರಂಭಿಸುತ್ತದೆ. ಲಿವರ್ ಕಸಿ ಶಸ್ತ್ರಚಿಕಿತ್ಸೆಯೇ ಸದ್ಯ ಇದಕ್ಕಿರುವ ಏಕೈಕ ಪರಿಹಾರ.

ತೀವ್ರ ಸ್ವರೂಪದ ಲಿವರ್ ವೈಫಲ್ಯ

ಅತ್ಯಲ್ಪ ಸಮಯದಲ್ಲಿ ಲಿವರ್​ಗೆ ಶೇ. 90 ಹಾನಿಯಾದಾಗ ತೀವ್ರ ಸ್ವರೂಪದ ಲಿವರ್ ವೈಫಲ್ಯ (ಎಎಲ್​ಎಫ್) ಎಂಬ ಮಾರಣಾಂತಿಕ ಕಾಯಿಲೆ ಉಂಟಾಗುತ್ತದೆ. ಇದಕ್ಕೆ ತುತ್ತಾದ ವ್ಯಕ್ತಿಯಲ್ಲಿ ನಿಶ್ಶಕ್ತಿ, ಗೊಂದಲದ ಮಾನಸಿಕ ಸ್ಥಿತಿ (ಎನ್​ಸೆಫೆಲೋಪಥಿ) ಉಂಟಾಗುತ್ತದೆ. ಕಾಮಾಲೆ ರೋಗಕ್ಕೂ ತುತ್ತಾಗುತ್ತಾರೆ. ಇದಕ್ಕೆ ಲಿವರ್ ಕಸಿ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ. ಎಎಲ್​ಎಫ್ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ, ಜನರ ನಿರ್ಲಕ್ಷ್ಯ ಹಾಗೆಯೇ ಮುಂದುವರಿದಿದೆ. ಇಂಥ ರೋಗಿಗಳಿಗೆ ತಜ್ಞ ವೈದ್ಯರಿಂದ ಸಕಾಲಕ್ಕೆ ಸಮರ್ಪಕ ಚಿಕಿತ್ಸೆ ಕೊಡಿಸಿದರೆ, ಜೀವ ಉಳಿಯುತ್ತದೆ.

ಮೂಲ ಕಾರಣ ಹೆಪಟೈಟಿಸ್

ತೀವ್ರ ಸ್ವರೂಪದ ಲಿವರ್ ವೈಫಲ್ಯಕ್ಕೆ ಜಾಗತಿಕವಾಗಿ ಹಲವು ಕಾರಣಗಳಿವೆಯಾದರೂ, ಭಾರತದಲ್ಲಿ ಹೆಪಟೈಟಿಸ್ ಇದಕ್ಕೆ ಮೂಲಕಾರಣ. ರ್ಯಾಟಾಲ್ ಪಾಯಿಸನಿಂಗ್ (ಹಳದಿ ರಂಜಕದಿಂದ ಲಿವರ್​ನಲ್ಲಿ ವಿಷಕಾರಕ ಅಂಶ ಉಂಟಾಗುವುದು) ಭಾರತದಲ್ಲಿ ಸಾಮಾನ್ಯ. ಇನ್ನು ಕೆಲವು ರೋಗಿಗಳಲ್ಲಿ ನಿಖರವಾಗಿ ರೋಗಲಕ್ಷಣವನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲವಾದರೂ, ಆಯಾ ಪ್ರದೇಶದ ಆಹಾರ ಪದ್ಧತಿ, ಜೀವನಶೈಲಿ ಗಮನಿಸಿ, ನಿಖರ ಕಾರಣ ಅರಿತು, ಸಮರ್ಪಕ ಚಿಕಿತ್ಸೆ ನೀಡಬೇಕಾಗುತ್ತದೆ.

ಸ್ವತಃ ಸರಿಪಡಿಸಿಕೊಳ್ಳುವ ಲಿವರ್!: ತನಗೆ ಏನಾದರೂ ಸಣ್ಣಪುಟ್ಟ ಹಾನಿಯಾದರೆ, ತನ್ನಿಂತಾನೆ ಸರಿಪಡಿಸಿಕೊಳ್ಳುವ ಸಾಮರ್ಥ್ಯ ಲಿವರ್​ಗೆ ಇರುತ್ತದೆ. ಇದಕ್ಕೆ ಸ್ವಲ್ಪ ಸಮಯಾವಕಾಶ ತಗಲುತ್ತದೆ. ಆದರೆ, ಎಎಲ್​ಎಫ್​ನಿಂದ ಬಳಲುತ್ತಿರುವವರಲ್ಲಿ ಲಿವರ್​ಗೆ ತನ್ನಿಂತಾನೇ ಸರಿಪಡಿಸಿಕೊಳ್ಳಲು ಸಮಯದ ಅಭಾವವಿರುತ್ತದೆ. ಲಿವರ್​ಗಾಗಿರುವ ಹಾನಿಯಿಂದಾಗಿ ದೇಹದಲ್ಲಿ ಸಂಗ್ರಹವಾಗುವ ವಿಷಕಾರಕ ಅಂಶಗಳು, ಹೊಟ್ಟೆಯಲ್ಲಿ ಬಾವು ಉಂಟಾಗಿ ದ್ರವ ತುಂಬಿಕೊಳ್ಳುವುದು, ಸೆರೆಬ್ರಲ್ ಇಡೀಮ (ಮಿದುಳು ಊತ) ಸಂಭವಿಸುತ್ತವೆ. ಮಿದುಳು ಮಿತಿಮೀರಿ ಊದಿಕೊಂಡಾಗ, ಅದಕ್ಕೆ ರಕ್ತಪೂರೈಕೆ ಸ್ಥಗಿತವಾಗಿ ಸಾವು ಸಂಭವಿಸುತ್ತದೆ. ಲಿವರ್ ಕಸಿ ಶಸ್ತ್ರಚಿಕಿತ್ಸೆ ಹೊರತಾಗಿ, ಯಕೃತ್ ಅನ್ನು ಪುನರುಜ್ಜೀವನಗೊಳಿಸಲು ಸೀಮಿತ ಅವಕಾಶವಿದೆ. ಆದರೆ, ಅವು ಹೆಚ್ಚಿನ ಯಶ ಕಂಡಿಲ್ಲ.

ಡಯಾಲಿಸಿಸ್ ಮಾದರಿಯ ಚಿಕಿತ್ಸೆ

ಬೆಂಗಳೂರಿನ ವೈದ್ಯರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡ ಕಳೆದೊಂದು ದಶಕದಿಂದ ಸತತವಾಗಿ ಶ್ರಮಿಸಿ, ಎಎಲ್​ಎಫ್​ನ ಚಿಕಿತ್ಸೆಗೆ ಕ್ರಾಂತಿಕಾರಿ ಎನ್ನಬಹುದಾದ ಎಕ್ಸ್​ಟ್ರಾಕಾಪೋರಿಯಲ್ ಬಯೋಇಂಜಿನೀರ್ಡ್ ಡ್ಯುಯಲ್ ಸೆಲ್ ಲಿವರ್ ರಿಜನರೇಷನ್ ಸಿಸ್ಟಂ (ಇಬಿಡಿಎಲ್​ಆರ್) ಎಂಬ ಐದೂವರೆ ಅಡಿ ಎತ್ತರದ ಯಂತ್ರವನ್ನು ಸಿದ್ಧಪಡಿಸಿದೆ. ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದವರಿಗೆ ಡಯಾಲಿಸಿಸ್ ಚಿಕಿತ್ಸೆಯ ಮೂಲಕ ರಕ್ತ ಶುದ್ಧೀಕರಿಸುವ ರೀತಿಯಲ್ಲೇ ಇಬಿಡಿಎಲ್​ಆರ್ ಯಂತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಇಲ್ಲಿ, ಫಿಲ್ಟರ್ ಇರುವುದಿಲ್ಲ. ಬದಲಿಗೆ, ಇಬಿಡಿಎಲ್​ಆರ್ ಯಂತ್ರದಲ್ಲಿರುವ ಇನ್​ಕ್ಯುಬೇಟರ್​ನಲ್ಲಿ ರೋಗಿಯ ಹೆಪಟೋಸೈಟ್ ಮತ್ತು ಎಂಡೋಥಿಯಲ್ ಕೋಶಗಳನ್ನು ಇರಿಸಿ, ಇದರ ಮೂಲಕ ಲಿವರ್ ಅನ್ನೇ ಹೋಲುವ ರೀತಿಯ ಕೋಶವನ್ನು ರೂಪಿಸಿ, ಅದರ ಮೂಲಕ ರೋಗಿಯಲ್ಲಿ ಸಂಗ್ರಹವಾಗಿರುವ ಮಲಿನ ರಕ್ತವನ್ನು ಹರಿಸಿ, ಶುದ್ಧೀಕರಿಸಿ, ರೋಗಿಯ ದೇಹಕ್ಕೆ ಮರುಪೂರೈಕೆ ಮಾಡಲಾಗುತ್ತದೆ. ಇದರಿಂದಾಗಿ ಹಾನಿಗೊಂಡಿರುವ ಲಿವರ್ ಮೇಲಿನ ಒತ್ತಡ ಕಡಿಮೆಯಾಗಿ, ತನ್ನಿಂತಾನೆ ದುರಸ್ತಿಗೊಳ್ಳಲು ಅದಕ್ಕೆ ಹೆಚ್ಚಿನ ಸಮಯಾವಕಾಶ ದೊರೆಯುತ್ತದೆ. ತೀವ್ರ ಸ್ವರೂಪದ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ವ್ಯಕ್ತಿಯಲ್ಲಿ ಈ ರೀತಿ ಲಿವರ್ ಕ್ರಮೇಣ ಪುನರುಜ್ಜೀವನಗೊಂಡು, ಪ್ರಾಣ ಉಳಿಯುತ್ತದೆ.

ನಿಖರ ತಪಾಸಣೆ ಮುಖ್ಯ

ಎಎಲ್​ಎಫ್ ಪತ್ತೆಗೆ ರೋಗಿಯನ್ನು ವಿಸõತ ವೈದ್ಯಕೀಯ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಲಿವರ್​ನ ಕಿಣ್ವಗಳು, ಬಿಲಿರೂಬಿನ್​ನ (ಹಳದಿ ಪಿತ್ತರಸ) ಲ್ಯಾಬೋರೇಟರಿ ಪರೀಕ್ಷೆಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಅವಧಿಯ ತಪಾಸಣೆ ಮಾಡಬೇಕಾಗುತ್ತದೆ. ಸಿಟಿ ಸ್ಕಾಯನ್ ಮತ್ತು ಎಂಆರ್​ಐಗಳ ಮೂಲಕ ಇತರ ಅಂಗಾಂಗಗಳ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಅರಿತು, ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಆಧುನಿಕ ಯುಗದಲ್ಲೂ ಚಿಕಿತ್ಸೆಗೆ ಪರದಾಟ

ಆಧುನಿಕತೆಯ ಆವೇಗದಲ್ಲಿ ವೈದ್ಯಕೀಯ ಲೋಕ ಸಾಕಷ್ಟು ಸುಧಾರಣೆಗಳನ್ನು ಕಾಣುತ್ತಿದೆ. ಇಷ್ಟಾಗಿಯೂ ಎಎಲ್​ಎಫ್​ಗೆ ಒಳಗಾಗಿರುವವರಿಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆ ಹೊರತುಪಡಿಸಿ, ಅನ್ಯ ಆಯ್ಕೆಯೇ ಲಭ್ಯವಿಲ್ಲದೇ ಇರುವುದು ಶೋಚನೀಯ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಲಿವರ್​ನ ಹಾನಿ, ಚಿಕಿತ್ಸೆಗೆ ರೋಗಿ ಸ್ಪಂದಿಸದಿರುವಂಥ ಸ್ಥಿತಿಯಲ್ಲಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ಅನಿವಾರ್ಯವೂ ಹೌದು. ಕೃತಕ ಲಿವರ್ ಮೂಲಕ ರೋಗಿಗಳಿಗೆ ನೆರವು ನೀಡುವ ಪ್ರಯತ್ನಗಳು ನಡೆದಿವೆಯಾದರೂ, ಅವು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಇಂಥ ರೋಗಿಗಳ ಪಾಲಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಾಗೂ ಬೆಂಗಳೂರಿನ ವೈದ್ಯರ ತಂಡ ಸಂಶೋಧಿಸಿರುವ ಎಕ್ಸ್​ಟ್ರಾಕಾಪೋರಿಯಲ್ ಬಯೋಇಂಜಿನೀರ್ಡ್ ಡ್ಯುಯಲ್ ಸೆಲ್ ಲಿವರ್ ರಿಜನರೇಷನ್ ಸಿಸ್ಟಂ (ಇಬಿಡಿಎಲ್​ಆರ್) ಆಶಾಕಿರಣವಾಗಿದೆ.

ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿ

ಎಎಲ್​ಎಫ್​ನಿಂದ ಬಳಲುತ್ತಿರುವ ಮೊಲಗಳು ಮತ್ತು ಹಂದಿಗಳಿಗೆ ಇಬಿಡಿಎಲ್​ಆರ್ ಮೂಲಕ ನೀಡಿರುವ ಪ್ರಾಯೋಗಿಕ ಚಿಕಿತ್ಸೆ ಭರ್ಜರಿ ಯಶಸ್ಸು ಕಂಡಿದೆ. ಈ ಪ್ರಯೋಗದಲ್ಲಿ ಈ ಪ್ರಾಣಿಗಳ ದೇಹದಲ್ಲಿರುವ ಪ್ರಾಕೃತಿಕ ಲಿವರ್ ಸಂಪೂರ್ಣವಾಗಿ ತನ್ನನ್ನು ತಾನು ಪುನರುಜ್ಜೀವನ ಮಾಡಿಕೊಂಡಿದೆ. ಇಬಿಡಿಎಲ್​ಆರ್ ಯಂತ್ರವು ಲಿವರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದ ಇನ್​ಕ್ಯುಬೇಟರ್​ನಲ್ಲಿರಿಸಿರುವ ಹೆಪಟೋಸೈಟ್ ಮತ್ತು ಎಂಡೋಥೀಲಿಯಲ್ ಕೋಶಗಳು, ಲಿವರ್​ನ ಸಂಪೂರ್ಣ ಚಯಾಪಚಯ ಕಾರ್ಯವನ್ನು ನಿರ್ವಹಿಸಿ, ನೈಸರ್ಗಿಕ ಲಿವರ್ ಮೇಲಿನ ಒತ್ತಡವನ್ನು ನಿವಾರಿಸುತ್ತವೆ. ಇದರಿಂದ, ತನಗಾಗಿರುವ ಹಾನಿಯನ್ನು ಸರಿಪಡಿಸಿಕೊಂಡು, ಪುನರುಜ್ಜೀವನಗೊಳ್ಳಲು ಪ್ರಾಕೃತಿಕ ಲಿವರ್​ಗೆ ಹೆಚ್ಚಿನ ಸಮಯಾವಕಾಶ ದೊರೆಯುತ್ತದೆ. ಇದಲ್ಲದೆ, ಲಿವರ್ ಕಸಿ ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ನಿವಾರಿಸುತ್ತದೆ.

ಮಾನವರ ಮೇಲೆ ಪ್ರಾಯೋಗಿಕ ಪರೀಕ್ಷೆ ಆರಂಭ

ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ಇಬಿಡಿಎಲ್​ಆರ್ ಯಂತ್ರ ಯಶಸ್ಸು ಗಳಿಸಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿನ ವೈದ್ಯಕೀಯ ಉಪಕರಣಗಳ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರ ದಿಂದ (ಸಿಡಿಎಸ್​ಸಿಒ) ಕ್ಲಿನಿಕಲ್ ಟ್ರಯಲ್​ಗಳನ್ನು ಕೈಗೊಳ್ಳಲು ಅನುಮತಿ ಪಡೆದು ಕೊಳ್ಳಲಾಗಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳ ಆಯ್ದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಮಾನವರ ಮೇಲಿನ ಇಬಿಡಿಎಲ್​ಆರ್ ಯಂತ್ರದ ಪ್ರಯೋಗಕ್ಕೆ ಚಾಲನೆ ದೊರೆತಿದೆ. ಈ ಹಂತದಲ್ಲೂ ಅದು ಹೆಚ್ಚಿನ ಯಶ ಕಂಡರೆ, ಎಎಲ್​ಎಫ್​ನ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಗುವುದು ನಿಶ್ಚಿತ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ https://ykrita.com/ಗೆ ಭೇಟಿ ಕೊಡಬಹುದು ಇಲ್ಲವೇ [email protected] ಇ-ಮೇಲ್ ವಿಳಾಸವನ್ನು ಸಂಪರ್ಕಿಸಬಹುದು.

  • ಎಕ್ಸ್​ಟ್ರಾ ಕಾಪೋರಿಯಲ್ ಬಯೋಇಂಜಿನೀರ್ಡ್ ಡ್ಯುಯಲ್ ಸೆಲ್ ಲಿವರ್ ರಿಜನರೇಷನ್ ಸಿಸ್ಟಂ (ಇಬಿಡಿಎಲ್​ಆರ್) ಅನ್ವೇಷಣೆ.
  • ಹಾಳಾದ ಯಕೃತ್ ಅನ್ನು ಡಯಾಲಿಸಿಸ್ ಮಾದರಿಯಲ್ಲಿ ಪುನರುಜ್ಜೀವನ ಮಾಡುವ ಯಂತ್ರ
  • ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿ
  • ಆಯ್ದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಬಳಕೆ

ತೀವ್ರ ಸ್ವರೂಪದ ಲಿವರ್ ವೈಫಲ್ಯದ ಲಕ್ಷಣಗಳು

ಕಾಮಾಲೆ (ಚರ್ಮ, ಕಣ್ಣು ಹಳದಿಯಾಗುವುದು) ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ ಉಂಟಾಗುವುದು, ಕಿಬ್ಬೊಟ್ಟೆಯಲ್ಲಿ ಅದರಲ್ಲೂ ಮುಖ್ಯವಾಗಿ ಕಿಬ್ಬೊಟ್ಟೆಯ ಬಲ ಮೇಲ್ಭಾಗದಲ್ಲಿ ನೋವು, ವಾಕರಿಕೆ, ವಾಂತಿ, ದಣಿವು ಮತ್ತು ನಿಶ್ಶಕ್ತಿ. ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡು ಬಂದಾಗ, ತಕ್ಷಣವೇ ರೋಗಿಯನ್ನು ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ಕೊಟ್ಟರೆ ಅವರನ್ನು ಉಳಿಸಲು ಸಾಧ್ಯವಾಗುತ್ತದೆ.

ಎಎಲ್​ಎಫ್ ರೋಗಿಗಳಿಗೆ ಮುಖ್ಯ ಚಿಕಿತ್ಸೆಗಳು

ಕೋಆಗ್ಯುಲೋಪಥಿ (ಅಧಿಕ ರಕ್ತಸ್ರಾವ ತಡೆ ಜತೆಗೆ ರಕ್ತದ ಇತರ ವ್ಯಾಧಿಗಳಿಗೆ ಚಿಕಿತ್ಸೆ) ನಿರ್ವಹಣೆ, ಪೌಷ್ಟಿಕ ಆಹಾರ ಒದಗಿಸುವುದು, ಎನ್-ಅಸಿಟೈಲ್​ಸಿಸ್ಟೀನ್​ನಂಥ ನಿರ್ದಿಷ್ಟ ನಂಜುನಿವಾರಕಗಳನ್ನು ಕೊಡುವುದು, ಲಿವರ್ ಕಸಿ ಶಸ್ತ್ರಚಿಕಿತ್ಸೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries