ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದಿಂದ ಬೆಳ್ಳಿಯ ಛಾಯಾಚಿತ್ರ ಸೇರಿದಂತೆ ಐದುವರೆ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವುಗೈದ ಪ್ರಕರಣದ ಆರೋಪಿಯನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಗೂಡಿನಬಳಿ ನಿವಾಸಿ ರಫಿಕ್ ಯಾನೆ ಮಹಮ್ಮದ್ ರಫೀಕ್(36)ಬಂಧಿತ. ಬೆಂಗಳೂರಿನಿಂದ ಈತನನ್ನು ಸೆರೆಹಿಡಿಯಲಾಗಿದೆ. ಮಾನ್ಯದ ಶ್ರೀ ಅಯ್ಯಪ್ಪ ಭಜನಾಮಂದಿರ ಅಲ್ಲದೆ, ಇತರ ಕೆಲವೊಂದು ಕಳವು ಪ್ರಕರಣಗಳಲ್ಲೂ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಡ್ಯನಡ್ಕದ ಬ್ಯಾಂಕ್‍ನಿಂದ ಭಾರಿ ಪ್ರಮಾಣದ ಚಿನ್ನ, ನಗದು ಕಳವುಗೈದ ಪ್ರಕರಣ ಸೇರಿದಂತೆ ಕೇರಳ, ಕರ್ನಾಟಕದ 60ಕ್ಕೂ ಮಿಕ್ಕಿದ ಕಳವುಪ್ರಕರಣಗಳಲ್ಲಿ ರಫೀಕ್ ಆರೋಪಿಯಾಗಿದಾನೆ. 2024 ನ.3ರಂದು ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದ ಕಬ್ಬಿಣದ ಗೇಟ್ ಮುರಿದು ನುಗ್ಗಿ, ಗರ್ಭಗುಡಿ ಬಾಗಿಲು ಒಡೆದು, ಸುಮಾರು ಒಂದುವರೆ ಲಕ್ಷ ರೂ. ಮೌಲ್ಯದ ಬೆಳ್ಳಿಯ ಛಾಯಾಚಿತ್ರ, ಇದಕ್ಕೆ ಅಲಂಕಾರ ನಡೆಸಿರುವ ಆರುಕಿಲೋ ಬೆಳ್ಳಿ ಆಭರಣ, 2ಗ್ರಾಂ ಚಿನ್ನದ ಲಾಕೆಟ್ ಸೇರಿದಂತೆ ಐದುವರೆ ಲಕ್ಷ ಮೌಲ್ಯದ ಸಾಮಗ್ರಿ ಕಳವುಗೈಯಲಾಗಿತ್ತು. ಅದೇ ದಿನ ಪೊಯಿನಾಚಿಯ ಶ್ರೀಧರ್ಮಶಾಸ್ತಾ ಕ್ಷೇತ್ರದಿಂದ ನಗದು ಸೇರಿದಂತೆ 70ಸಾವಿರ ರೂ. ಮೌಲ್ಯದ ಸಾಮಗ್ರಿ ದೋಚಲಾಗಿದ್ದು, ಈ ಕಳವಿನಲ್ಲೂ ಮಹಮ್ಮದ್ ರಫೀಕ್ ಆರೋಪಿಯಾಗಿದ್ದಾನೆ. ಈ ಹಿಂದೆ ಎಡನಿರು ಶ್ರೀ ವಿಷ್ಣುಮಂಗಲ ದೇವಾಲಯದ ಕಾಣಿಕೆಹುಂಡಿ ಕಳವು, ನೆಲ್ಲಿಕಟ್ಟೆ ಶ್ರಿ ಗುರು ಮಂದಿರದಿಂದ ನಡೆದ ಕಳವು ಪ್ರಕರಣದಲ್ಲಿ ಈತ ಆಮೀಲಾಗಿದ್ದು, ಇತರ ಆರೋಪಿಗಳಾದ ಉಳ್ಳಾಲದ ಮಹಮ್ಮದ್ ಫೈಸಲ್, ಬಂಟ್ವಾಳದ ಸದತ್ ಆಲಿ. ಕುಂಬಳೆ ಕೊಡ್ಯಮ್ಮೆಯ ಇಬ್ರಾಹಿಂ ಕಲಂದರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ವಿಚಾರಣೆಗೊಳಪಡಿಸಿದಾಗ ಮಹಮ್ಮದ್ ರಫೀಕ್ ಬಗ್ಗೆ ಮಾಹಿತಿ ಲಭಿಸಿತ್ತು.
ಕದ್ದಬೆಳ್ಳಿ ವಸ್ತು ಬೆಂಗಳೂರಲ್ಲಿ ಮಾರಾಟ:
ಮಹಮ್ಮದ್ ರಫೀಕ್ ಕಳವುಗೈದಿದ್ದ ಬೆಳ್ಳಿಯ ಛಾಯಾಚಿತ್ರ ಸೆರಿದಂತೆ ಬೆಳ್ಳಿವಸ್ತುಗಳನ್ನು ಬೆಂಗಳೂರಿನ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬೆಳ್ಳಿ ವಸ್ತುಗಳನ್ನು ಅಂಗಡಿಮಾಲಿಕ ಕರಗಿಸಿಟ್ಟುಕೊಂಡಿದ್ದು, ಇದನ್ನು ಬದಿಯಡ್ಕ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ಭಜನಾಮಂದಿರದಿಂದ ಕಳವುಗೈದ 350ಗ್ರಾಂ ಬೆಳ್ಳಿ ವಸ್ತುಗಳನ್ನು ಇನ್ನೊಬ್ಬ ಆರೋಪಿ ಫೈಸಲ್‍ನ ಉಳ್ಳಾಲದ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ಮಹಮ್ಮದ್ ರಫೀಕ್ ತನ್ನ ಮೊಬೈಲ್ ಬಳಸದೆ, ಇತರ ರಾಜ್ಯದ ಕಾರ್ಮಿಕರ ಮೊಬೈಲ್ ಮೂಲಕ ಕಳವು ವ್ಯವಹಾರಕ್ಕೆ ಸಂಬಂಧಿಸಿದ ಸಂಭಾಷಣೆ ನಡೆಸುತ್ತಿದ್ದನೆನ್ನಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಹಾಗೂ ಡಿವೈಎಸ್‍ಪಿ ಸಿ.ಕೆ ಸುನಿಲ್ ಕುಮಾರ್ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

