ಇತ್ತೀಚಿನ ದಿನಗಳಲ್ಲಿ ಒತ್ತಡ ಎಲ್ಲರನ್ನು ಕೂಡ ಕಾಡುವ ಸಮಸ್ಯೆ. ಆದ್ರೆ ಬಹುಪಾಲು ಮಂದಿ ಇದನ್ನು ಸಮಸ್ಯೆ ಎಂದು ನಿರ್ಧಾರಿಸುವುದಿಲ್ಲ. ಒತ್ತಡ ಕೂಡ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಉಂಟು ಮಾಡುವಂತಹ ಅತ್ಯಂತ ಪ್ರಮುಖ ಅಂಶವಾಗಿದೆ. ಅತೀ ಹೆಚ್ಚು ಒತ್ತಡ ಎದುರಿಸುವ ವ್ಯಕ್ತಿಯಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸುವುದು ನೋಡಬಹುದು.
ಒತ್ತಡ ಎಂದರೆ ಅದು ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಇರಬೇಕೆಂದಿಲ್ಲ. ಹಾಗೆ ಒತ್ತಡ ಎಂದರೆ ಕೆಲಸದಲ್ಲಿನ ಸಮಸ್ಯೆಯೂ ಅಲ್ಲ. ಹಾಗೆ ಮಕ್ಕಳು ಕೂಡ ಈಗ ಒತ್ತಡದಲ್ಲಿರುವುದು ನೋಡಬಹುದು, ಆತ ದಿನದ ಬಹುತೇಕ ಗಂಟೆ ಒತ್ತಡದಲ್ಲೇ ಕಳೆದರೆ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗುತ್ತದೆ. ಮಾನಸಿಕ ಆರೋಗ್ಯ ಹದಗೆಡಲು ಈ ಒತ್ತಡ ಪ್ರಮುಖ ಕಾರಣವಾಗುತ್ತದೆ.
ಪುರುಷರಿಗೆ ಕಚೇರಿ ಒತ್ತಡ, ಹಣಕಾಸು ಒತ್ತಡ, ಗೃಹಿಣಿಯರಿಗೆ ಮನೆ, ಕುಟುಂಬ ನಿರ್ವಹಣೆಯ ಒತ್ತಡ, ಮಕ್ಕಳಲ್ಲಿ ಪರೀಕ್ಷೆ, ಫಲಿತಾಂಶ ಒತ್ತಡ ಹೀಗೆ ಎಲ್ಲಾ ಮಂದಿಯೂ ಒಂದಲ್ಲಾ ಒಂದು ರೀತಿಯ ಒತ್ತಡದಲ್ಲಿ ಸಿಲುಕಿರುತ್ತಾರೆ. ಆದ್ರೆ ನಾವಿಂದು ಈ ಒತ್ತಡದ ಜಂಜಾಟದಿಂದ ಕೆಲ ಸಮಯ ಹೊರಬರಲು ಇರುವ ಕೆಲವು ಮಾರ್ಗಗಳ ಕುರಿತಂತೆ ತಿಳಿದುಕೊಳ್ಳೋಣ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿಯ ಭಾವ ಮೂಡಬಹುದು.
ಗಾರ್ಡನಿಂಗ್
ನೀವು ಮನೆಯಲ್ಲಿ ಹಲವು ಬಗೆಯ ಒತ್ತಡಕ್ಕೆ ಒಳಗಾಗಿದ್ದರೆ ಗಾರ್ಡನಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಅಂದರೆ ನೀವು ಎಷ್ಟು ಸಮಯ ಗಿಡಗಳ ಪೋಷಣೆಯಲ್ಲಿ ತೊಡಗುತ್ತೀರೋ ಅಥವಾ ಹೂವುಗಳು, ಗಿಡಗಳಿಗೆ ನೀರು ಹಾಕುವ ಕಾರ್ಯದಲ್ಲಿ ತೊಡಗಿರುತ್ತಿರೋ ಅದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೆ ನಿತ್ಯ ಈ ಕೆಲಸ ಮಾಡಲು ಪ್ರೇರೇಪಣೆಯೂ ಕೂಡ ಸಿಗುತ್ತದೆ.
ಚಿತ್ರ ಕಲೆ ಮತ್ತು ಕ್ರಾಫ್ಟಿಂಗ್
ಒತ್ತಡ ನಿವಾರಣೆಯ ಮತ್ತೊಂದು ತಂತ್ರ ಏನೆಂದರೆ ಚಿತ್ರಕಲೆ ಹಾಗೂ ಕ್ರಾಫ್ಟಿಂಗ್, ಚಿತ್ರಕಲೆಯು ನಮ್ಮ ಮನದಲ್ಲಿನ ಒತ್ತಡವನ್ನು ಕ್ಷಣಕಾಲ ನಿವಾರಿಸುತ್ತದೆ. ನಿಮ್ಮಲ್ಲಿ ಆನಂದ ತರಲಿದೆ. ಹಾಗೆ ಪೇಪರ್ ಕಟಿಂಗ್, ಕ್ರಾಫ್ಟ್ ಮೇಕಿಂಗ್ ಕೂಡ ವಿಶ್ರಾಂತಿ ನೀಡುವ ಅಭ್ಯಾಸಗಳಾಗಿವೆ.
ಓದುವುದು
ಇತ್ತೀಚಿಗೆ ಪತ್ರಿಕೆಗಳು, ಪುಸ್ತಕಗಳ ಓದುವಿಕೆಯಿಂದ ದೂರವೇ ಉಳಿಯುತ್ತಿದ್ದಾರೆ. ಆದರೆ ಪುಸ್ತಕ ಓದುವುದು ನಿಮ್ಮಲ್ಲಿ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ನಿಮ್ಮಲ್ಲಿ ತಾಳ್ಮೆಯನ್ನು ಹೆಚ್ಚಿಸಲಿದೆ. ಹಾಗೆ ಚಂಚಲತೆಯಿಂದ ಕೂಡಿರುವ ನೀವು ಒಂದೇ ಸ್ಥಳದಲ್ಲಿ ತಪಸ್ಸು ಮಾಡಲು ಕುಳಿತುಕೊಳ್ಳುವಷ್ಟು ಮನಸ್ಸನ್ನು ಓದುವಿಕೆ ಬಲಪಡಿಸಲಿದೆ. ಹಾಗೆ ಒತ್ತಡವಿದ್ದಾಗ ಒಂದೊಳ್ಳೆ ಪುಸ್ತಕ ಹಿಡಿದು ಓದಲು ಕುಳಿತುಕೊಳ್ಳಬೇಕು.
ವ್ಯಾಯಾಮ
ಒತ್ತಡದಲ್ಲಿದ್ದಾಗ ನೀವು ವ್ಯಾಯಾಮದಲ್ಲಿ ತೋಡಗಬೇಕು. ನಿತ್ಯ ಅರ್ಧ ಗಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ ನಿಮ್ಮ ಮನಸ್ಸಿನ ಮೇಲೆ ಇದು ಪರಿಣಾಮ ಉಂಟು ಮಾಡುತ್ತದೆ. ನೀವು ಒತ್ತಡ ತಡೆಯುವ ಶಕ್ತಿ ವೃದ್ಧಿಸುತ್ತೆ, ಅದರಲ್ಲೂ ಪ್ರಣಾಯಾಮ, ಬೆಳಗಿನ ಸೂರ್ಯ ನಮಸ್ಕಾರದಂತಹ ಆಸನಗಳು ಇದಕ್ಕೆ ಪೂರಕ.
ಫೋಟೋಗ್ರಫಿ
ಮೊಬೈಲ್‌ನಲ್ಲಿ ರೀಲ್ಸ್, ವಿಡಿಯೋ ನೋಡುವುದು ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಆದ್ರೆ ಅದೇ ಮೊಬೈಲ್‌ನಲ್ಲಿ ಫೋಟೋಗ್ರಫಿ ಮಾಡುವುದು ನಿಮ್ಮ ಸುತ್ತ ಮುತ್ತಲಿನ ಕೆಲವೊಂದು ವಸ್ತುಗಳ ಫೋಟೋವನ್ನು ಸೆರೆ ಹಿಡಿಯುವುದು ಅಥವಾ ಕ್ಯಮರಾ ಇದ್ದರೆ ಫೋಟೋಗ್ರಫಿ ಮೂಲಕ ಅದ್ಭುತ ಕ್ಷಣಗಳ ಸೆರೆಹಿಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ಒತ್ತಡ ನಿವಾರಣೆಯ ಸೂತ್ರವಾಗಿದೆ.
ಕ್ರೀಡೆ
ಕ್ರೀಡೆ ಒತ್ತಡ ನಿವಾರಣೆಯ ಬಹುಮುಖ್ಯ ಅಂಶ. ಅದರಲ್ಲೂ ಒಳಾಂಗಣ ಕ್ರೀಡೆಗಳು ನಿಮ್ಮ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುವ ಜೊತೆಗೆ ನಿಮ್ಮ ಒತ್ತಡವನ್ನು ನಿವಾರಿಸಲಿದೆ. ಪದಬಂದ ಬಿಡಿಸುವುದು, ಒಗಟು ಬಿಡಿಸುವುದು, ಚೆಸ್, ಟೆನಿಸ್, ಬ್ಯಾಡ್ಮಿಂಟನ್ ಹೀಗೆ ಒಂದಿಷ್ಟು ಕ್ರೀಡೆಗಳ ಆಡುವ ಅಭ್ಯಾಸ ಬೆಳೆಸಿಕೊಳ್ಳುವುದು ನಿಮ್ಮ ಒತ್ತಡವನ್ನು ಪರಿಯಲ್ಲಿ ಇಡಲು ಸಹಕಾರಿಯಾಗಲಿದೆ.





