ಕಾಸರಗೋಡು : ಕೇರಳ ಸರ್ಕಾರ ಕೇಂದ್ರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದ್ಧವಾಗಿರಬೇಕು ಎಂದು ಎನ್.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಅನೂಪ್ ಕುಮಾರ್ ತಿಳಿಸಿದ್ದಾರೆ. ಅವರು ಕೂಡ್ಲು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಎನ್.ಟಿ.ಯು. ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ನೀತಿಗಳನ್ನು ಪಾಲಿಸದೆ, ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ಕೇರಳ ಸರ್ಕಾರದ ಧೋರಣೆಯಿಂದ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಹೀನಾಯ ಸ್ಥಿತಿಗೆ ತಲುಪುವಂತಾಗಿದೆ ಎಂದು ಅವರು ದೂರಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಟಿ.ಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಅರವಿಂದಾಕ್ಷ ಭಂಡಾರಿ, ಸತೀಶ್ ಶೆಟ್ಟಿ, ಎಂ. ರಂಜಿತ್. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ವಿ.ಕೆ.ಬಾಬು, ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷ ಬಿ.ನಾಗರಾಜ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿದರು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಕೆ.ಆರ್.ಚಂದ್ರಿಕಾ ವಂದಿಸಿದರು.
ಈ ಸಂದರ್ಭ ನಡೆದ ಸಂಘಟನಾ ಸಮ್ಮೇಳನವನ್ನು ಎನ್‍ಟಿಯು ರಾಜ್ಯ ಉಪಾಧ್ಯಕ್ಷ ಪ್ರಭಾಕರನ್ ನಾಯರ್ ಉದ್ಘಾಟಿಸಿದರು. ಸತೀಶ್ ಕುಮಾರ್ ಶೆಟ್ಟಿ, ಕೆ.ಅಜಿತ್ ಕುಮಾರ್, ದಿನೇಶ್. ಪಿ ಮತ್ತು ಶರತ್‍ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಿಗೆ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ ಉದ್ಘಾಟಿಸಿದರು.
ಕೇರಳ ವನವಾಸಿ ವಿಕಾಸ ಕೇಂದ್ರದ ಅಧ್ಯಕ್ಷ ಪಿ.ರಾಧಾಕೃಷ್ಣನ್, ಸುಚಿತಾ, ಬಾಲಕೃಷ್ಣ, ಕೆ.ವಿ. ಪ್ರದೀಪ್ ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಟಿ.ಕೃಷ್ಣನ್ ಅಧ್ಯಕ್ಷ, ಕೆ. ಅಜಿತ್ ಕುಮಾರ್ ಕಾರ್ಯದರ್ಶಿ ಮತ್ತು ಮಹಾಬಲ ಭಟ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.





