ಕಾಸರಗೋಡು : ಜಿಲ್ಲೆಯ 103 ಕುಟುಂಬ ಶ್ರೀ ಉತ್ಪಾದನಾ ಘಟಕಗಳಿಗೆ ಸಬ್ಸಿಡಿ ನೀಡಲು ಕಾಸರಗೋಡು ಜಿಲ್ಲಾ ಪಂಚಾಯಿತಿ ಸಮಿತಿ ಸಭೆ ತೀರ್ಮಾನಿಸಿದೆ. ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಯೋಜನೆಯನ್ವಯ ಜಿಲ್ಲೆಯ ವಿವಿಧ ವಲಯಗಳಲ್ಲಾಗಿ ಕಾರ್ಯಾಚರಿಸುತ್ತಿರುವ ಕುಟುಂಬಶ್ರೀಯ 103 ಉತ್ಪಾದನಾ ಘಟಕಗಳಿಗೆ ಧನಸಹಾಯವನ್ನು ಒದಗಿಸಲಾಗುತ್ತಿದೆ. ಜಿಲ್ಲೆಯ 50 ಶಾಲೆಗಳಲ್ಲಿ ಇನ್ಸಿನೇಟರ್ ಯಂತ್ರಗಳನ್ನು ಅಳವಡಿಸಲಾಗುವುದು. ಬಾಲಕಿಯರಿಗೆ ಬಹಳ ಪ್ರಯೋಜನವಾಗುವ ನೂತನ ಯೋಜನೆ ಇದಾಗಿದೆ. ಚೆರ್ಕಳ, ಬದಿಯಡ್ಕ, ಚೆಮ್ನಾಡ್, ಪಳ್ಳಿಕೆರೆ, ಮೊಗ್ರಾಲ್, ಪಿಲಿಕ್ಕೂಡ್, ಪುಲ್ಲೂರ್ ಪೆರಿಯ, ಕಾರಡ್ಕ, ಕೋಳತ್ತುರ್, ಮತ್ತು ಚೀಮೇನಿ ಶಾಲೆಗಳಲ್ಲಿ "ಮಾ ಕೇರ್ " ಯೋಜನೆಯನ್ನು ಆರಂಭಿಸಲಾಗುತ್ತದೆ.
"ಕಲ್ಬಿಲೆ ಬೇಕಲ್ " ಎಂಬ ಹೆಸರಿನಿಂದ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ನಡೆಸುವ "ಹ್ಯಾಪಿನೆಸ್ ಫೆಸ್ಟ್'ಯಶಸ್ವಿಯಾಗಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜನವರಿ 24 ರಂದು ಸಂಜೆ 8 ಗಂಟೆಗೆ ನೋಂದವಣೆ, ಪ್ರಾಚ್ಯವಸ್ತು ಸಂಗ್ರಹಾಲಯಗಳ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಫೆಸ್ಟ್ ಉದ್ಘಾಟಿಸುವರು. ಜನವರಿ 25 ರಂದು ಮಧ್ಯಾಹ್ನ 2 ಗಂಟೆಗೆ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್, 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಕೆ.ಬಿ. ಗಣೇಶ್‍ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಮಹಿಳಾ ಸಂಚಾರಿ ಗುಂಪಿನ ಸಂಗಮ , ಪೆÇೀಷಕರ ಜಾಗೃತಿ ಚರ್ಚೆ, ರಾಜ್ಯ ಮಟ್ಟದಲ್ಲಿ ಎ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು, ಸಂಜೆಯ ಸಂಭ್ರಮ, ಹೂಡಿಕೆದಾರರ ಸಂಗಮ , ಪ್ರವಾಸೀ ಹೂಡಿಕೆದಾರರ ಸಮಾವೇಶ ಮೊದಲಾದ ಕಾರ್ಯಕ್ರಮ ಫೇಸ್ಟ್‍ನಲ್ಲಿ ನಡೆಯಲಿವೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಾನವಾಸ್ ಪಾದೂರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಕೆ. ಶಕುಂತಲಾ, ವಕೀಲೆ ಎಸ್. ಎನ್. ಸರಿತಾ, ಎಂ. ಮನು, ಜಿಪಂ ಸದಸ್ಯರಾದ ಶಿನೋಜ್ ಚಾಕೊ, ಸಿ.ಜೆ. ಸಜಿತ್, ಫಾತಿಮತ್ ಶಮ್ನಾ, ಪಿ.ಬಿ. ಶೆಫೀಕ್, ಎಂ. ಶೈಲಜಾ ಭಟ್, ನಾರಾಯಣ ನಾಯ್ಕ್, ಜಾಸ್ಮಿನ್ ಕಬೀರ್ ಚೆರ್ಕಳ, ಜಮೀಲಾ ಸಿದ್ದಿಕ್, ಜೋಮೋನ್ ಜೋಸ್, ಗೋಲ್ಡನ್ ಅಬ್ದುರಹ್ಮಾನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.




