ನವದೆಹಲಿ: "ವಿದೇಶಗಳಲ್ಲಿ ಒಂದೇ ಧರ್ಮ, ಒಂದೇ ಪವಿತ್ರ ಗ್ರಂಥ ಮತ್ತು ಒಬ್ಬ ಪ್ರವಾದಿ ಇದ್ದರೆ, ಭಾರತದಲ್ಲಿ ಸನಾತನ ಧರ್ಮವು ಅನೇಕ ಚಿಂತನೆಗಳ ನದಿಗಳು ಹರಿಯುವ ಸಾಗರವಾಗಿದೆ" ಎಂದು ಪ್ರಮುಖ ತಪಸ್ವಿ ಮತ್ತು ಸನ್ಯಾಸಿ ಶ್ರೀ ಎಂ.ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂಭಮೇಳದಲ್ಲಿ ಭಾಗವಹಿಸಿದ ನಂತರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಭಮೇಳದಲ್ಲಿ ನಡೆಯುವಷ್ಟು ಜನರು ಧರ್ಮದ ಹೆಸರಿನಲ್ಲಿ ಒಟ್ಟುಗೂಡುವುದು ಜಗತ್ತಿನ ಬೇರೆಲ್ಲಿಯೂ ಇಲ್ಲ. ಅದಕ್ಕಾಗಿಯೇ ಇಲ್ಲಿಗೆ ಬರುವ ವಿದೇಶಿಯರಿಗೆ ಇದು ತುಂಬಾ ಆಶ್ಚರ್ಯಕರವಾಗಿರುತ್ತದೆ. ತಾನು ಈವರೆಗೆ ಆರು ಕುಂಭಮೇಳಗಳನ್ನು ನೋಡಿರುವುದಾಗಿಯೂ, ಪ್ರಯಾಗರಾಜ್‍ನಲ್ಲಿ ನಡೆಯುವ ಈ ಕುಂಭಮೇಳವು 144 ವರ್ಷಗಳ ನಂತರ ಮುಂದಿನ ಮಹಾಕುಂಭಮೇಳ ಬರುವವರೆಗೆ ಬಹಳ ಮಹತ್ವದ್ದಾಗಿದೆ ಎಂದೂ ಹೇಳಿದರು.
“ಕುಂಭಮೇಳದ ಕಲ್ಪನೆ ತುಂಬಾ ಹಳೆಯದು. ಹರ್ಷವರ್ಧನನ ಆಳ್ವಿಕೆಯಲ್ಲಿ ಪ್ರಯಾಗರಾಜ್‍ನಲ್ಲಿ ಕುಂಭಮೇಳ ನಡೆಯುತ್ತಿತ್ತು. ಆ ಸಮಯದಲ್ಲಿ ಇದನ್ನು ಬೌದ್ಧರು ಆಯೋಜಿಸಿದ್ದರು. ಕುಂಭಮೇಳವನ್ನು ಅದ್ಧೂರಿಯಾಗಿ ಆಯೋಜಿಸಿದವರಲ್ಲಿ ಆದಿ ಶಂಕರಾಚಾರ್ಯರು ಮೊದಲಿಗರು. ಕುಂಭಮೇಳವನ್ನು ಆಯೋಜಿಸುವ ಮೂಲಕ, ಶಂಕರಾಚಾರ್ಯರು ವಿವಿಧ ಸಮುದಾಯಗಳ ಸಾಧುಗಳು ಮತ್ತು ಜನರನ್ನು ಒಟ್ಟುಗೂಡಿಸಿ ಪರಸ್ಪರ ಸಂವಹನ ನಡೆಸಲು ಮತ್ತು ಅರ್ಥಮಾಡಿಕೊಳ್ಳಲು ಸನಾತನ ಧರ್ಮದಲ್ಲಿ ಏಕತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು.
ಕುಂಭ ಎಂದರೆ ಮಡಕೆ. ಕುಂಭಮೇಳದ ಉದ್ದೇಶವೇನೆಂದರೆ, ಸನಾತನ ಧರ್ಮದ ಎಲ್ಲಾ ಜನರು ಒಂದು ಪಾತ್ರೆಯಲ್ಲಿರುವಂತೆ ಒಂದೇ ಸ್ಥಳದಲ್ಲಿ ಒಟ್ಟುಗೂಡುವುದು, ಪರಸ್ಪರ ಚರ್ಚಿಸುವುದು, ಸನಾತನ ಧರ್ಮವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಇತರರಿಗೂ ಅರ್ಥವಾಗುವಂತೆ ಮಾಡುವುದು. " ಎಂದು ಶ್ರೀ ಎಂ ಹೇಳಿರುವರು.





