ಹೊಸ ವರ್ಷದ ಪ್ರಾರಂಭದಲ್ಲಿಯೇ ಅಂದರೆ ಜನವರಿ 25ರಂದು ಬಹಳ ಅಪರೂಪವಾದ ಖಗೋಳ (Astronomy) ಘಟನೆಯೊಂದು ನಡೆಯಲಿದೆ. ಈ ದಿನ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರವನ್ನು ಮಾಡಲಿವೆ. ಈ ಅದ್ಭುತ ನೋಟವನ್ನು ನೀವು ಕೂಡ ಕಣ್ತುಂಬಿಕೊಳ್ಳಬಹುದು.
ಈ ರಚನೆಯು, ಬಾಹ್ಯಾಕಾಶ (Space) ಪ್ರಿಯರಿಗೆ ಹಬ್ಬವಾಗಲಿದೆ ಹಾಗೂ ಶುಕ್ರ, ಮಂಗಳ, ಗುರು, ಶನಿ, ನೆಪ್ಚೂನ್ ಮತ್ತು ಯುರೇನಸ್ ಎಂಬ ಆರು ಗ್ರಹಗಳ ಮೆರವಣಿಗೆ ಜನವರಿ 21 ರಿಂದ ಭಾರತದಲ್ಲಿ ಗೋಚರಿಸುತ್ತದೆ.
ಗ್ರಹಗಳ ಮೆರವಣಿಗೆ ಎಂದರೇನು?
ಗ್ರಹಗಳ ಮೆರವಣಿಗೆ ಎಂದರೆ, ರಾತ್ರಿ ಆಕಾಶದಲ್ಲಿ ನಾಲ್ಕು ಅಥವಾ ಹೆಚ್ಚಿನ ಗ್ರಹಗಳು ಏಕಕಾಲದಲ್ಲಿ ಸಾಲಿನಲ್ಲಿ ನಿಂತಾಗ ಬಳಸಲಾಗುವ ಪದ. ಇದು ಖಗೋಳಶಾಸ್ತ್ರದ ಪದವಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ.
ತ್ರಿ ಆಯಾಮದ ಸೌರವ್ಯೂಹದಲ್ಲಿ ಗ್ರಹಗಳು ನೇರ ರೇಖೆಯಲ್ಲಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ; ಆದರೆ, ಭೂಮಿಯಿಂದ ನೋಡಿದ ನಮಗೆ ಸಾಲುಗಟ್ಟಿ ನಿಂತಿರುವ ರೀತಿ ಕಣಿಸಿಕೊಳ್ಳುತ್ತದೆ. ಈ ಗ್ರಹಗಳು ವಾಸ್ತವವಾಗಿ ಲಕ್ಷಾಂತರ ಕಿಲೋಮೀಟರ್ ದೂರದಲ್ಲಿರುತ್ತವೆ. ಗ್ರಹಗಳು ಸಾಲಾಗಿ ಕಣುವುದು ಅಪರೂಪವಲ್ಲದಿದ್ದರೂ, ಆದರೆ ಪ್ರತಿ ವರ್ಷ ನಾಲ್ಕು ಅಥವಾ ಐದು ಪ್ರಕಾಶಮಾನವಾದ ಗ್ರಹಗಳನ್ನು ಏಕಕಾಲದಲ್ಲಿ ನೋಡಲು ಸಾಧ್ಯವಿಲ್ಲ.
ಆದರೆ ಈ ಬಾರಿ ನೀವು ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡಬಹುದು. ಈ ರಚನೆಯು ಆಕಾಶದಲ್ಲಿ ಗ್ರಹಗಳು ನರ್ತಿಸುವಂತೆ ಒಂದು ಸುಂದರ ಭ್ರಮೆಯನ್ನು ಉಂಟುಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಮೇಲೆ ಹೇಳಿದಂತೆ, ಶುಕ್ರ, ಮಂಗಳ, ಗುರು, ಶನಿ, ನೆಪ್ಚೂನ್ ಮತ್ತು ಯುರೇನಸ್ ಎಂಬ ಆರು ಗ್ರಹಗಳ ಮೆರವಣಿಗೆ ಜನವರಿ 21 ರಿಂದ ಭಾರತದಲ್ಲಿ ಗೋಚರಿಸುತ್ತದೆ ಮತ್ತು ನಾಲ್ಕು ವಾರಗಳ ಕಾಲ ಹಾಗೆಯೇ ಇರುತ್ತದೆ, ಇದರಿಂದಾಗಿ ಈ ವಿದ್ಯಮಾನವನ್ನು ವೀಕ್ಷಿಸಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಗ್ರಹಗಳ ಸಂಯೋಗವನ್ನು ಹೇಗೆ ವೀಕ್ಷಿಸುವುದು?
ಗ್ರಹಗಳ ಜೋಡಣೆಯನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಜನವರಿ 21 ರಂದು ರಾತ್ರಿ 8:30 ರ ಸುಮಾರಿಗೆ, ಸೂರ್ಯಾಸ್ತದ ಸ್ವಲ್ಪ ಸಮಯದ ನಂತರ. ಆದರೆ, ಗೋಚರತೆಯು ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಮತ್ತು ಪ್ರದೇಶದಲ್ಲಿನ ಬೆಳಕಿನ ಮಾಲಿನ್ಯದ ಮಟ್ಟದಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
ಉತ್ತಮ ಅನುಭವಕ್ಕಾಗಿ, ಕನಿಷ್ಠ ಬೆಳಕಿನ ಹಸ್ತಕ್ಷೇಪವಿರುವ ಸ್ಥಳವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ, ಉದಾಹರಣೆಗೆ ಗ್ರಾಮೀಣ ಪ್ರದೇಶ ಅಥವಾ ನಗರದ ದೀಪಗಳಿಂದ ದೂರವಿರುವುದು.
ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ಬರಿಗಣ್ಣಿನಿಂದ ನೋಡಬಹುದಾದರೂ, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳನ್ನು ವೀಕ್ಷಿಸಲು ದೂರದರ್ಶಕದ ಬಳಕೆಯ ಅಗತ್ಯವಿರುತ್ತದೆ. ಸೂರ್ಯಾಸ್ತದ ನಂತರ ಮೊದಲ ಎರಡು ಗಂಟೆಗಳ ಕಾಲ ಶುಕ್ರ ಮತ್ತು ಶನಿಯು ನೈಋತ್ಯದಲ್ಲಿ, ಗುರುವು ತಲೆಯ ಮೇಲೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಮತ್ತು ಮಂಗಳವು ಪೂರ್ವಕ್ಕೆ ಇರುತ್ತದೆ.
* ಏಳು ಗ್ರಹಗಳ ಮೆರವಣಿಗೆ:
ಜನವರಿ 25 ರಂದು ಬುಧ ಗ್ರಹವು ಕೆಲವು ದಿನಗಳ ಕಾಲ ಗ್ರಹಗಳ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಭೂಮಿಯನ್ನು ಹೊರತುಪಡಿಸಿ ಸೌರವ್ಯೂಹದ ಎಲ್ಲಾ ಏಳು ಗ್ರಹಗಳ ಜೊತೆ ಕಣಿಸಿಕೊಳ್ಳುತ್ತದೆ. ಆದರೆ, ಬುಧ ಗ್ರಹವನ್ನು ಅದರ ಚಿಕ್ಕ ಗಾತ್ರ ಮತ್ತು ಸೂರ್ಯನ ಸಾಮೀಪ್ಯದಿಂದಾಗಿ ಅದನ್ನು ಗುರುತಿಸುವುದು ತುಂಬ ಕಷ್ಟವಾಗುತ್ತದೆ.
ಜನವರಿ ಪೂರ್ತಿ ಆರು ಗ್ರಹಗಳು ಗೋಚರಿಸುತ್ತವೆ, ಜನವರಿ 25 ರಂದು ಬುಧ ಗ್ರಹವು ಸಂಕ್ಷಿಪ್ತವಾಗಿ ಸೇರಿಕೊಂಡಿದ್ದು, ಈ ಗ್ರಹ ಮೆರವಣಿಗೆ ಅಪರೂಪದ ಮತ್ತು ಆಕರ್ಷಕ ದೃಶ್ಯವನ್ನು ಒದಗಿಸುತ್ತದೆ.
ನೀವು ಅನುಭವಿ ಖಗೋಳಶಾಸ್ತ್ರಜ್ಞರಾಗಿರಲಿ ಅಥವಾ ಕುತೂಹಲಕಾರಿ ನಕ್ಷತ್ರ ವೀಕ್ಷಕರಾಗಿರಲಿ, ಈ ಖಗೋಳ ಘಟನೆಯು ನಮ್ಮ ಸೌರವ್ಯೂಹದ ಅದ್ಭುತಗಳನ್ನು ಸವಿಯಲು ಒಂದು ಉತ್ತಮ ಅವಕಾಶವಾಗಿದೆ. ನಿಮ್ಮ ದೂರದರ್ಶಕವನ್ನು ಹಿಡಿದು, ಕತ್ತಲೆಯ ಸ್ಥಳಕ್ಕೆ ಹೋಗಿ, ಸೌರವ್ಯೂಹದ ಅದ್ಭುತಗಳನ್ನು ನೋಡಿ ಆನಂದಿಸಿ.
ಈ ಖಗೋಳ ಪ್ರದರ್ಶನವನ್ನು ನಿಜವಾಗಿಯೂ ಆನಂದಿಸಲು, ಕನಿಷ್ಠ ಬೆಳಕಿನ ಮಾಲಿನ್ಯವಿರುವ ಪ್ರದೇಶವನ್ನು ಕಂಡುಹಿಡಿಯುವುದು ಅತ್ಯಗತ್ಯ. ನಗರಗಳು ಮತ್ತು ನಗರ ಪ್ರದೇಶಗಳಿಂದ ಬರುವ ಪ್ರಕಾಶಮಾನವಾದ ದೀಪಗಳು ದೂರದ ಗ್ರಹಗಳ ನೋಟವನ್ನು ನಿರ್ಬಂಧಿಸಬಹುದು, ಇದರಿಂದಾಗಿ ಜೋಡಣೆಯನ್ನು ನೋಡಲು ಹೆಚ್ಚು ಕಷ್ಟವಾಗುತ್ತದೆ.
ಕೃತಕ ದೀಪಗಳು ಕಡಿಮೆ ಇರುವ ಗ್ರಾಮೀಣ ಸ್ಥಳಗಳಿಗೆ ಅಥವಾ ದೂರದ ಸ್ಥಳಗಳಿಗೆ ಹೋಗುವುದನ್ನು ಪರಿಗಣಿಸಿ. ರಾಷ್ಟ್ರೀಯ ಉದ್ಯಾನವನಗಳು, ಗ್ರಾಮಾಂತರ ಅಥವಾ ಕರಾವಳಿ ಪ್ರದೇಶಗಳು ನಕ್ಷತ್ರ ವೀಕ್ಷಣೆಗೆ ಸೂಕ್ತವಾದ ಹಿನ್ನೆಲೆಯನ್ನು ಒದಗಿಸಬಹುದು.




