ಕುಂಬಳೆ : ಕುಂಬಳೆ ಆರಿಕ್ಕಾಡಿ ಕೋಟೆಯ ಸನಿಹದ ಪಾಳುಬಾವಿಯಲ್ಲಿ ಇದೆಯೆನ್ನಲಾದ ಭಾರೀ ನಿಧಿಯನ್ನು ಹೊರತೆಗೆಯಲು ಯತ್ನಿಸಿದ ಪ್ರಕರಣದಲ್ಲಿ ಗ್ರಾಪಂ ಉಪಾಧ್ಯಕ್ಷ ಸೇರಿದಂತೆ ಐದು ಮಂದಿಗೆ ಠಾಣೆಯಿಂದ ಜಾಮೀನು ಮಂಜೂರುಮಾಡಿ ಬಿಡುಗಡೆಗೊಳಿಸಲಾಗಿದೆ. ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರು, ಪೊವ್ವಲ್ ನಿವಾಸಿ ಮಹಮ್ಮದ್ ಫಿರೋಜ್, ಮೊಗ್ರಾಲ್‍ಪುತ್ತೂರು ನಿವಾಸಿ ಜಾಫರ್, ಪಾಲಕುನ್ನು ನಿವಾಸಿ ಅಜಾಜ್ ಹಾಗೂ ನೀಲೇಶ್ವರ ಬಂಗಳ ನಿವಾಸಿ ಸಹದುದ್ದೀನ್ ಜಾಮೀನಿನಲ್ಲಿ ಬಿಡುಗಡೆಗೊಂಡವರು.
ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಕೋಟೆಯಿಂದ ನಿಧಿ ದೋಚುವ ಯತ್ನ ನಡೆದಿದ್ದು, ಇಲಾಖೆ ಅದಿಕಾರಿಗಳು ತಪಾಸಣೆಗೆ ಆಗಮಿಸುವ ಮೊದಲೇ ಆರೋಪಿಗಳನ್ನು ಠಾಣೆಯಿಂದ ಜಾಮೀನು ನೀಡಿ ಬಿಡುಗಡೆಗೊಳಿಸಿರುವುದು ಹೆಚ್ಚಿನ ಸಂಶಯಕ್ಕೆ ಕಾರಣವಾಗಿದೆ. ಸೋಮವಾರ ಸಂಜೆ ಆರಿಕ್ಕಾಡಿ ಕೋಟೆ ಸನಿಹದ ಪಾಳುಬಾವಿಯೊಳಗಿಂದ ಅಗೆಯುವ ಶಬ್ದ ಕೇಳಿ ಆಸುಪಾಸಿನವರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಐದೂ ಮಂದಿಯನ್ನು ಬಂಧಿಸಿದ್ದರು.




