ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ವಿಜಿಲೆನ್ಸ್ ದಳ ನಡೆಸಿದ ತಪಾಸಣೆಯಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಪೆರ್ಲದ ಸೂಪರ್ ಮಾರ್ಕೆಟ್ ಹಾಗೂ ಗೋದಾಮು ಮಾಲೀಕರಿಗೆ 10ಸಾವಿರ ರೂ. ದಂಡ ವಿಧಿಸಿ, ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಹೋಟೆಲ್‍ನ ತ್ಯಾಜ್ಯವನ್ನು ಅಜಾಗರೂಕತೆಯಿಂದ ನಿರ್ವಹಣೆ ಮಾಡಿ ಹೋಟೆಲ್ ಹಿಂಭಾಗದಲ್ಲಿ ರಾಶಿ ಹಾಕಿದ್ದ ಹೊಟೇಲ್ ಮಾಲೀಕರೊಬ್ಬರಿಗೆ 5ಸಾವಿರ ರೂ. ರೂಪಾಯಿ ದಂಡ ವಿಧಿಸಿ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಯಿತು. ಕಟ್ಟಡ ಸಮುಚ್ಚಯದಲ್ಲಿನ ಅಂಗಡಿಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಗ್ರೀನ್ ಕಲೆಕ್ಷನ್ ಸೇನೆಗೆ ಹಸ್ತಾಂತರಿಸದಿರುವುದನ್ನು ಪತ್ತೆಹಚ್ಚಿದ ಅಧಿಕಾರಿಗಳು, ಪೆರ್ಲ ಸನಿಹದ ಇಡಿಯಡ್ಕದ ರೆಸಿಡನ್ಶಿಯಲ್ ಕಟ್ಟಡ ಮಾಲಿಕಗೆ 5ಸಾವಿರ ರೂ. ದಂಡ ವಿಧಿಸಲಾಗಿದೆ. ಸ್ಕ್ವಾಡ್ ಲೀಡರ್ ಕೆ.ವಿ.ಮುಹಮ್ಮದ್ ಮದನಿ, ಎನ್ಮಕಜೆ ಗ್ರಾಮ ಪಂಚಾಯತ್ ಕ್ಲರ್ಕ್ ಮಣಿಕಂಠನ್ ಪಿ, ಸ್ಕ್ವಾಡ್ ಸದಸ್ಯ ಫಾಝಿಲ್ ಇ.ಕೆ ತಪಾಸಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.




