HEALTH TIPS

ಭಾರತದ ಮೇಲೆ ಹೆಚ್ಚಿನ ಆಮದು ಸುಂಕ: ಡೊನಾಲ್ಡ್‌ ಟ್ರಂಪ್‌

 ವಾಷಿಂಗ್ಟನ್‌: 'ಭಾರತ, ಚೀನಾ ಮತ್ತು ಬ್ರೆಜಿಲ್‌ ದೇಶಗಳು ಅಮೆರಿಕದ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುತ್ತಿವೆ. ಇದರಿಂದ ಅಮೆರಿಕಕ್ಕೆ ಹಾನಿ ಉಂಟಾಗುತ್ತಿದೆ. ಹಾಗಾಗಿ, ಅಮೆರಿಕ ಕೂಡ ಈ ದೇಶಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಭಾರತ, ಚೀನಾ ಸದಸ್ಯರಾಗಿರುವ ಬ್ರಿಕ್ಸ್‌ ದೇಶಗಳ ಮೇಲೆ ಶೇ 100ರಷ್ಟು ಆಮದು ಸುಂಕ ವಿಧಿಸುವ ಬಗ್ಗೆ ಟ್ರಂಪ್‌ ಅವರು ಈ ಹಿಂದೆ ಹಲವು ಬಾರಿ ಹೇಳಿದ್ದರು.

ಫ್ಲಾರಿಡಾದಲ್ಲಿ ಸೋಮವಾರ ನಡೆದ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ಅಮೆರಿಕಕ್ಕೆ ಹಾನಿ ಉಂಟು ಮಾಡುತ್ತಿರುವ ಅವರು (ಭಾರತ, ಚೀನಾ ಮತ್ತು ಬ್ರೆಜಿಲ್‌) ತಮ್ಮ ದೇಶಕ್ಕೆ ಒಳಿತಾಗಲಿ ಎಂದು ಬಯಸುತ್ತಿದ್ದಾರೆ ಅಷ್ಟೇ. ಈ ಕಾರಣಕ್ಕಾಗಿಯೇ ಅವರು ನಮ್ಮ ಮೇಲೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದಾರೆ' ಎಂದರು.

'ಅಮೆರಿಕವೇ ಮೊದಲು ಎನ್ನುವ ನಮ್ಮ ಆರ್ಥಿಕ ನೀತಿ ಅನ್ವಯ ನಾವು ಬೇರೆ ದೇಶಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕಗಳನ್ನು ವಿಧಿಸುತ್ತೇವೆ. ಅಮೆರಿಕದ ಕಾರ್ಮಿಕರು, ಉದ್ಯಮಿಗಳ ಮೇಲಿನ ತೆರಿಗೆಯನ್ನು ಕಡಿತ ಮಾಡುತ್ತೇವೆ. ಈ ಮೂಲಕ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ' ಎಂದರು.

'ನಮಗೆ ಅಮೆರಿಕ ಮೊದಲು. ನಮ್ಮ ಬೊಕ್ಕಸವು ತುಂಬುವುದಕ್ಕಾಗಿ ನಾವು ನ್ಯಾಯಯುತವಾದ ವ್ಯವಸ್ಥೆಯೊಂದನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ನಾವು ಅಮೆರಿಕವನ್ನು ಮತ್ತೊಮ್ಮೆ ಶ್ರೀಮಂತ ದೇಶವನ್ನಾಗಿ ರೂಪಿಸಬೇಕಿದೆ. ಇದು ಶೀಘ್ರವಾಗಿಯೇ ನೆರವೇರಲಿದೆ' ಎಂದರು.

'ಫೆಬ್ರುವರಿಯಲ್ಲಿ ಮೋದಿ ಅಮೆರಿಕಕ್ಕೆ'

'ಭಾರತದೊಂದಿಗೆ ಅಮೆರಿಕದ ಬಾಂಧವ್ಯ ಚೆನ್ನಾಗಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಬಹುಶಃ ಫೆಬ್ರುವರಿಯಲ್ಲಿ ಅಮೆರಿಕಕ್ಕೆ ಬರಲಿದ್ದಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆ ಕುರಿತು ಅವರು ಪ್ರತಿಕ್ರಿಯಿಸಿದರು.

'ಅಕ್ರಮ ವಲಸಿಗರನ್ನು ವಾಪಸ್‌ ಕರೆಸಿಕೊಳ್ಳಲು ಅವರು ಒಪ್ಪಿಕೊಂಡರೇ' ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು 'ನಾವು ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾವುದು ಸರಿಯಾದ್ದುದ್ದೋ ಅದನ್ನೇ ಅವರು (ಮೋದಿ) ಮಾಡಲಿದ್ದಾರೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries