HEALTH TIPS

ವಿಜ್ಞಾನ-ಮಾನವೀಯತೆಗೆ ಸಾಹಿತ್ಯ ಸೇತು

ಜೈಪುರ: ಭಾರತದ ನಾನಾ ಭಾಗ ಮತ್ತು ವಿಶ್ವದ ಅನೇಕ ಕಡೆಗಳ ಸಾಹಿತ್ಯಾಸಕ್ತರು, ವಿಚಾರ ಪ್ರಿಯರ ಕುತೂಹಲ, ಹುಮ್ಮಸ್ಸಿನಲ್ಲಿ ಜೈಪುರ ಸಾಹಿತ್ಯ ಉತ್ಸವದ (ಜೈಪುರ್ ಲಿಟ್‌ಫೆ‌ಸ್ಟ್‌) 18ನೇ ಆವೃತ್ತಿ ಗುರುವಾರ ಆರಂಭಗೊಂಡಿತು.

ಡಂಕನ್‌ ಚಾಪ್ಲೆನ್ ಅವರ ಸೌಂಡ್‌ಸ್ಕೇಪ್‌ ಸೃಷ್ಟಿಸಿದ ಧ್ಯಾನಯೋಗ್ಯ ವಾತಾವರಣದಲ್ಲಿ ತ್ಯಾಗರಾಜರ ಕೀರ್ತನೆ ಮತ್ತು ಮೀರಾ ಭಜನ್ ಒಳಗೊಂಡ ಸುಪ್ರಿಯಾ ನಾಗರಾಜ್ ಅವರ ಸಂಗೀತ ಸುಧೆ, ನಾತುಲಾಲ್ ಸೋಳಂಕಿ ತಂಡದ ನಗಾರದ ನಾದಮಾಧುರ್ಯ, ರಾಜಸ್ಥಾನದ ಜಾನಪದದ ತುಣುಕು ಹೊತ್ತ ಪುಟಾಣಿ ಮೆರವಣಿಗೆ ಉದ್ಘಾಟನಾ ಸಮಾರಂಭಕ್ಕೆ ರಂಗು ತುಂಬಿತು.

ತೆರೆದ ಅಂಗಣದಲ್ಲಿರುವ ಮುಖ್ಯ ವೇದಿಕೆ 'ಫ್ರಂಟ್‌ ಲಾನ್‌'ನಲ್ಲಿ ನಡೆದ ಪ್ರಮುಖ ಗೋಷ್ಠಿಗಳಲ್ಲಿ ಸಹೃದಯರು ಜಾಗ ಸಾಲದೆ ನಿಂತುಕೊಂಡೇ ಭಾಗವಹಿಸಿದರು. ಗೋಷ್ಠಿಗಳು ಮುಗಿದ ಮೇಲೆ ಲೇಖಕರು, ಚಿಂತಕರ ಹಸ್ತಾಕ್ಷರ ಪಡೆಯಲು ಮುಗಿಬಿದ್ದವರು ನೂರಿನ್ನೂರು ಮೀಟರ್ ಉದ್ದದ ಸಾಲಿನಲ್ಲಿ ಸರದಿಗಾಗಿ ಕಾದರು.

ಮೊದಲ ದಿನದ ವಿಚಾರ ಮಂಥನದಲ್ಲಿ ವಿಜ್ಞಾನ-ತಂತ್ರಜ್ಞಾನ ಮತ್ತು ಮಾನವಿಕ-ಸಾಹಿತ್ಯದ ವಿಷಯಗಳು ಚರ್ಚೆಗೆ ಬಂದವು. ದಿಕ್ಸೂಚಿ ಭಾಷಣ ಮಾಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ವೆಂಕಿ ರಾಮಕೃಷ್ಣನ್, ವಿಜ್ಞಾನ ಮತ್ತು ಮಾನವೀಯ ವಿಷಯಗಳ‌ ನಡುವಿನ ಕಂದಕ ಇಲ್ಲವಾಗಿಸಲು ಭಾವಲೋಕ ಸೇತುವೆಯಾಗಬೇಕಾಗಿದೆ ಎಂದರು.

'ಎಐ ಮತ್ತು ಜೆನೆಟಿಕ್ ಎಂಜಿನಿಯರಿಂಗ್‌ನಂಥ ತಂತ್ರಜ್ಞಾನ ಭರವಸೆ ಮೂಡಿಸಿದೆ. ಆದರೆ ಅದರ‌ ಬಳಕೆಯಲ್ಲಿ ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ. ಪರಿಸರ, ಆಹಾರ ಭದ್ರತೆ, ಭವಿಷ್ಯದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಾಣಬೇಕಾದ ಮಹತ್ತರ ಜವಾಬ್ದಾರಿ ವಿಜ್ಞಾನ ಲೋಕಕ್ಕೆ ಇರುವುದರಿಂದ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ' ಎಂದರು.

'ವಿಜ್ಞಾನಿಗಳು ಅವರಷ್ಟಕ್ಕೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ, ತತ್ವಶಾಸ್ತ್ರ, ಇತಿಹಾಸ ಮುಂತಾದವುಗಳ ಗಟ್ಟಿ ಕೋಟೆಯ ಕಾವಲಿದ್ದರೆ ಕಾರ್ಯಯೋಜನೆಗಳು ಯಶಸ್ವಿಯಾಗಬಲ್ಲವು' ಎಂದು ವೆಂಕಿ ಹೇಳಿದರು.

'ಅಂತರಂಗದ ಮಗುವಿನ ಲೋಕ' ಎಂಬ ವಿಷಯದಲ್ಲಿ ಪ್ರಕಾಶಕಿ ಮೇರು ಗೋಖಲೆ ನಡೆಸಿಕೊಟ್ಟ ಸಂವಾದದಲ್ಲಿ ಮಾತನಾಡಿದ ಲೇಖಕಿ ಸುಧಾ ಮೂರ್ತಿ 'ಕಥಾಲೋಕ ಭಾವನಾತ್ಮಕವಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ಭಾವಲೋಕಕ್ಕೂ ವಿಜ್ಞಾನಕ್ಕೂ ತಳುಕು ಹಾಕುವ ಪ್ರಯತ್ನ ಮಾಡಬಾರದು' ಎಂದರು.

'ಬರೆಯುವಾಗ ಮಗುವಾಗುವ ನಾನು ಎಂದಿಗೂ ಸಹಜವಾಗಿ ಇರಲು ಬಯಸುತ್ತೇನೆ. ಅದರಲ್ಲಿ ಖುಷಿ ಇದೆ. ಬರೆಯುವ ಮೊದಲು ಅಧ್ಯಯನದಲ್ಲಿ ತೊಡಗುತ್ತೇನೆ. ದುಃಖದ ಪರಿಸ್ಥಿತಿಯ ಕಥೆಗಳನ್ನು ಬರೆಯುವುದಿಲ್ಲ. ನನ್ನ ಕಥೆಗಳೆಲ್ಲವೂ ಶುಭ ಮುಕ್ತಾಯ ಕಾಣುತ್ತವೆ' ಎಂದರು.

'ಸಮಸ್ಯೆಗಳು ಕಾಡಿದಾಗ ನನ್ನ ಅನೇಕ ಕಥೆಗಳು ನನಗೇ ಸಮಾಧಾನ ನೀಡುತ್ತವೆ. ಸಮಸ್ಯೆಗಳು ಬಂದಾಗ ನಾವು ಅದಕ್ಕಿಂತ ದೊಡ್ಡವರಾಗಬೇಕು. ಹಾಗಾದಾಗ ಸಮಸ್ಯೆ ಸಣ್ಣದಾಗಿ ಹೋಗುತ್ತದೆ ಎಂಬುದು ನನ್ನ ಜೀವನ ತತ್ವ' ಎಂದು ಹೇಳಿದರು.

 ವೆಂಕಿ ರಾಮಕೃಷ್ಣನ್ ದಿಕ್ಸೂಚಿ ಭಾಷಣ ಮಾಡಿದರು ಸಂಜಯ್ ರಾಯ್


ಸಂಜಯ್ ರಾಯ್‌ ಜೈಪುರ್ ಲಿಟ್‌ಫೆಸ್ಟ್‌ ನಿರ್ವಾಹಕಜೈಪುರ್ ಲಿಟ್‌ಫೆಸ್ಟ್‌ನಲ್ಲಿ ಈ ವರೆಗೆ 8 ಸಾವಿರ ಲೇಖಕರು ಪಾಲ್ಗೊಂಡಿದ್ದು 50 ಲಕ್ಷ ಜನರು ಇಲ್ಲಿಗೆ ಬಂದಿದ್ದಾರೆ. ವಿದೇಶದ ಹಲವು ದೇಶಗಳಲ್ಲಿ ಈ ಉತ್ಸವ ಜನಜನಿತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries