ನವದೆಹಲಿ: ನೇಮಕಾತಿಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಕರಡು ನಿಯಮಗಳ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ರಾಜ್ಯಪಾಲರು ನೇಮಿಸುವ ಪರಿಪಾಠವು ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಯುಜಿಸಿ ಪ್ರಕಟಿಸಿರುವ ಕರಡು ನಿಯಮಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ಮಹತ್ವದ ಬದಲಾವಣೆಯ ಪ್ರಸ್ತಾಪ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಯುಜಿಸಿ ಕರಡು ನಿಯಮದ (2025) ಪ್ರಕಾರ, ಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರಿಗೆ ಅಪರಿಮಿತ ನಿಯಂತ್ರಣಾಧಿಕಾರ ನೀಡಲಾಗಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡದವರೂ ಈ ಹುದ್ದೆಗಳನ್ನು ಅಲಂಕರಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಸಂಯುಕ್ತ ವ್ಯವಸ್ಥೆ ಮತ್ತು ರಾಜ್ಯಗಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ' ಎಂದು ಆರೋಪಿಸಿದ್ದರು.
ಯುಜಿಸಿ ಪ್ರಕಟಿಸಿರುವ ಕರಡು ನಿಯಮಗಳು (2025) ವಾಸ್ತವವಾಗಿ 2010ರ ಯುಜಿಸಿ ನಿಯಮಗಳ ಸ್ವರೂಪದಲ್ಲಿಯೇ ಇವೆ. ಅದರ ಪ್ರಕಾರ, ಬೋಧಕ ಮತ್ತು ಇತರ ಶೈಕ್ಷಣಿಕ ಸಿಬ್ಬಂದಿ ನೇಮಕದಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಳ್ಳಲು ಆಯ್ಕೆ ಸಮಿತಿ ರಚಿಸಲಾಗುತ್ತದೆ ಎಂದು ಪ್ರಧಾನ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಅವರು, 'ದೇಶದ ಯುವ ಜನರು ಶಿಕ್ಷಿತರಾಗುವುದನ್ನು ಮತ್ತು ದೇಶ ಅಭಿವೃದ್ದಿ ಆಗುವುದನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಹೀಗಾಗಿಯೇ ಕಾಂಗ್ರೆಸ್ ಶಿಕ್ಷಣ ವಿಷಯದಲ್ಲಿ ಗೊಂದಲ ಉಂಟಾಗುವಂತೆ ಮಾಡಿ, ಯುವ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ' ಎಂದು ಅವರು ದೂರಿದ್ದಾರೆ.
'ದೇಶದ ಯುವಜನರು ಸೇರಿದಂತೆ ವಿವಿಧ ವಲಯಗಳು ಮುಕ್ತವಾಗಿ ಸ್ವೀಕರಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್‌ಇಪಿ) ಕಾಂಗ್ರೆಸ್ ವಿರೋಧಿಸಿದೆ. ದಶಕಗಳ ಕಾಲ ಅಧಿಕಾರದಲ್ಲಿದ್ದ ಈ ಕಾಂಗ್ರೆಸ್ ಪಕ್ಷವು ದೇಶದ ಶಿಕ್ಷಣ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದೆ. ಅಲ್ಲದೆ, ಇದೇ ಪಕ್ಷವು ನಮ್ಮ ಸಂಸ್ಕೃತಿಯ ವೈಭವಯುತ ಪರಂಪರೆಯನ್ನು ಪಠ್ಯಗಳಿಂದ ಅಳಿಸುವ ಕಾರ್ಯ ಮಾಡಿತ್ತು' ಎಂದು ಅವರು ಆರೋಪಿಸಿದ್ದಾರೆ.





