ಬೆಂಗಳೂರು: ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಸಿಕಂದರಾಬಾದ್‌ನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಮನೆಯಲ್ಲಿ ಆಯೋಜಿಸಿದ್ದ 'ಸಂಕ್ರಾಂತಿ ಸಂಭ್ರಮ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾದರು.
ಈ ವೇಳೆ ದಕ್ಷಿಣ ಭಾರತದ ಸಂಸ್ಕೃತಿ ಪರಿಚಯಿಸುವ ಅನೇಕ ಕಲೆಗಳನ್ನು ಮೋದಿ ಅವರಿಗೆ ಕಿಶನ್ ರೆಡ್ಡಿ ಪರಿಚಯಿಸಿದರು. ಈ ವೇಳೆ ಖ್ಯಾತ ನಟ ಚಿರಂಜೀವಿ ಹಾಜರಿದ್ದರು.
ಮೋದಿ ಅವರು ಎತ್ತುಗಳಿಗೆ ಬೆಲ್ಲ, ಕೊಬ್ಬರಿ, ಬಾಳೆಹಣ್ಣು ತಿನ್ನಿಸಿ ಖುಷಿಪಟ್ಟರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ ಎಂದಿದ್ದಾರೆ.
ತೆಲುಗು, ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ.
ನನ್ನ ಸಂಪುಟ ಸಹೋದ್ಯೋಗಿ ಜಿ. ಕಿಶನ್ ರೆಡ್ಡಿ ಅವರ ನಿವಾಸದಲ್ಲಿ ಸಂಕ್ರಾಂತಿ ಮತ್ತು ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದೆ. ಜೊತೆಗೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ ಎಂದಿದ್ದಾರೆ.
ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ ಕೃಷಿ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಕೃತಜ್ಞತೆ, ಸಮೃದ್ಧಿ ಮತ್ತು ಹೊಸತನದ ಆಚರಣೆಯಾಗಿದೆ. ಎಲ್ಲರಿಗೂ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬದ ಶುಭಾಶಯಗಳು. ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧ ಸುಗ್ಗಿಯ ಋತುವನ್ನು ಹಾರೈಸುತ್ತೇನೆ ಎಂದಿದ್ದಾರೆ.


