ಲಖನೌ: ವಕ್ಫ್ ಮಂಡಳಿಯ ಮಾದರಿಯಲ್ಲೇ 'ಸನಾತನ ಮಂಡಳಿ' ರಚಿಸಬೇಕು ಎಂದು ಮಹಾ ಕುಂಭಮೇಳದಲ್ಲಿ ನಡೆಯುತ್ತಿರುವ ಧರ್ಮ ಸಂಸತ್ತಿನಲ್ಲಿ ಮಂಡನೆಯಾಗಿರುವ ಪ್ರಸ್ತಾವಕ್ಕೆ ವಿಘ್ನ ಎದುರಾಗಿದೆ. ಸೋಮವಾರ ಆರಂಭವಾದ ಧರ್ಮ ಸಂಸತ್ತನ್ನು 13 ಅಖಾಡಗಳ ಪೈಕಿ ಹೆಚ್ಚಿನವು ಬಹಿಷ್ಕರಿಸಿವೆ.
ಧರ್ಮ ಬೋಧಕ ದೇವಕಿ ನಂದನ್ ಠಾಕೂರ್ ಅವರು ಧರ್ಮ ಸಂಸತ್ ಆಯೋಜಿಸಿದ್ದಾರೆ. ಹಲವಾರು ಸ್ವಾಮೀಜಿಗಳು ಹಾಗೂ ಭಕ್ತರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ಹಾಗೂ ಸನಾತನ ಮಂಡಳಿಯನ್ನು ರಚಿಸುವ ಪ್ರಸ್ತಾವಕ್ಕೆ ಅಖಾಡಗಳು ಒಪ್ಪಿದ್ದವು.
ಆದರೆ, ಮಹಾಕುಂಭದಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣಕ್ಕೆ ಅಖಾಡಗಳು ಧರ್ಮ ಸಂಸತ್ತಿನಿಂದ ದೂರ ಇರಲಿವೆ ಎಂದು ಅಖಿಲ ಭಾರತ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ರವೀಂದ್ರ ಪುರಿ ಅವರು ಹೇಳಿದ್ದಾರೆ.
ಸನಾತನ ಮಂಡಳಿಯ ನೇತೃತ್ವ ವಹಿಸಿಕೊಳ್ಳುವ ಬಯಕೆ ಠಾಕೂರ್ ಅವರಿಗೆ ಇದೆ, ಅವರು ಅಖಾಡಗಳನ್ನು ಮಂಡಳಿಯಿಂದ ಹೊರಗಿರಿಸಲು ಬಯಸಿದ್ದಾರೆ ಎಂಬ ಆತಂಕದಿಂದಾಗಿ ಅಖಾಡ ಪರಿಷತ್ತು ಧರ್ಮ ಸಂಸತ್ತನ್ನು ಬಹಿಷ್ಕರಿಸಿದೆ ಎಂದು ಮೂಲಗಳು ಹೇಳಿವೆ.




