ನವದೆಹಲಿ: ವಿದೇಶಿ ಸರ್ಕಾರವೊಂದು ಕೆನಡಾದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಕೆನಡಾ ಆಯೋಗವು ತನಿಖೆ ನಡೆಸಿತ್ತು. ತನಿಖೆ ಬಳಿಕ ಆಯೋಗವು ವರದಿ ನೀಡಿದ್ದು, ಭಾರತವು ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ' ಎಂದಿದೆ. ಈ ವರದಿಯನ್ನು ಭಾರತವು ತಿರಸ್ಕರಿಸಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯವು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ಭಾರತದ ವಿರುದ್ಧದ ಇಂಥ ಆರೋಪವನ್ನು ನಾವು ತಳ್ಳಿ ಹಾಕುತ್ತೇವೆ. ನಿಜ ಹೇಳಬೇಕು ಎಂದರೆ, ಕೆನಡಾ ಸರ್ಕಾರವೇ ಭಾರತದ ಆಂತರಿಕ ವಿಚಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡಿದೆ' ಎಂದು ಹೇಳಿದೆ.
'ಈ ಮೂಲಕ ಭಾರತದೊಳಗೆ ಅಕ್ರಮ ವಲಸಿಗರು ನುಸುಳಿ, ಇಲ್ಲಿ ಸಂಘಟಿತ ಅಪರಾಧ ಚಟುವಟಿಕೆಗಳನ್ನು ನಡೆಸಿಲು ನೀವು ಅನುವು ಮಾಡಿಕೊಡುತ್ತಿದ್ದೀರಿ. ಅಕ್ರಮ ವಲಸಿಗರು ನಮ್ಮ ದೇಶದೊಳಗೆ ನುಸುಳಲು ನೀವು ಕುಮ್ಮಕ್ಕು ನೀಡುತ್ತಿದ್ದು, ಇದನ್ನು ನಾವು ಸಹಿಸುವುದಿಲ್ಲ' ಎಂದು ಹೇಳಿದೆ.
'ಕೆನಡಾದ ಚುನಾವಣೆಯಲ್ಲಿ ತಮ್ಮ ಏಜೆಂಟರನ್ನು ಬಳಸಿಕೊಂಡು ಮೂರು ಪಕ್ಷಗಳಿಗೆ ಭಾರತ ಸರ್ಕಾರವು ರಹಸ್ಯವಾಗಿ ಹಣ ನೀಡಿದೆ' ಎಂದು ಕೆನಡಾದ 'ದಿ ಗ್ಲೋಬಲ್ ಆಯಂಡ್ ಮೇಲ್' ಎಂಬ ಪತ್ರಿಕೆಯು 2023ರಲ್ಲಿ ವರದಿ ಮಾಡಿತ್ತು. ಈ ಬಳಿಕ ಕೆನಡಾ ಪ್ರಧಾನಿ ಜಸ್ಟೀನ್ ಟ್ರೂಡೊ ಅವರು ಈ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಈಗ ಕೆನಡಾ ಆಯೋಗವು ತನಿಖೆ ಪೂರ್ಣಗೊಳಿಸಿ ವರದಿ ನೀಡಿದೆ.





