ನವಿ ಮುಂಬೈ: ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ದೇವಾಲಯವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, 'ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಮೂಲವೇ ಸೇವಾ ಮನೋಭಾವವಾಗಿದೆ. ನಮ್ಮ ಸರ್ಕಾರ ನಿಸ್ವಾರ್ಥದಿಂದ ಜನರ ಕಲ್ಯಾಣಕ್ಕಾಗಿ ದಶಕಗಳಿಂದಲೂ ಕೆಲಸ ಮಾಡುತ್ತಿದೆ' ಎಂದರು.
ಇಸ್ಕಾನ್ ದೇಗುಲದ ಉದ್ಘಾಟನೆಯಲ್ಲಿ ಪಾಲ್ಗೊಂಡ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸೇವಾ ಮನೋಭಾವ ಜಾತ್ಯತೀತತೆಯ ಗುರುತು. ನಮ್ಮ ಆಧ್ಯಾತ್ಮಿಕತೆಯ ಪ್ರಮುಖ ಅಡಿಪಾಯವೇ ಸೇವಾ ಮನೋಭಾವ. ಭಾರತ ಕೇವಲ ಭೌಗೋಳಿಕ ಗಡಿಗಳಿಂದ ಸುತ್ತುವರಿದ ಭೂಮಿಯ ತುಂಡಲ್ಲ. ಇಲ್ಲಿ ಸಂಪ್ರದಾಯ, ಜ್ಞಾನವೇ ಅಧ್ಯಾತ್ಮ. ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು' ಎಂದು ಹೇಳಿದರು.
'ಭಗವದ್ಗೀತೆಯನ್ನು ಭೋಧಿಸುವ ಮೂಲಕ ಜಾಗತಿಕ ಭಕ್ತಿ ಚಳವಳಿ ಆರಂಭವಾಯಿತು. ಕೃಷ್ಣನನ್ನು ಬೇರೆ ಬೇರೆ ವಿಧಾನಗಳಿಂದ ಪೂಜಿಸುವ ಮೂಲಕ ಇಡೀ ಜಗತ್ತು ಒಂದಾಗಿದೆ. ಮಾನವೀಯ ಗುಣಗಳನ್ನು ಪ್ರಚಾರ ಮಾಡುವ ಸೂಕ್ಷ್ಮ ಸಮಾಜವನ್ನು ನಿರ್ಮಿಸಲು ಯುವ ಜನರಿಗೆ ಇಸ್ಕಾನ್ ಪ್ರೇರೇಪಿಸುತ್ತಿದೆ' ಎಂದರು.









