ನವದೆಹಲಿ (PTI): ರಾಷ್ಟ್ರ ರಾಜಧಾನಿಯ ಕೋಟ್ಲಾ ರಸ್ತೆಯ 9ಎನಲ್ಲಿ ನಿರ್ಮಾಣಗೊಂಡ ಪಕ್ಷದ ಮುಖ್ಯ ಕಚೇರಿಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಬುಧವಾರ ಉದ್ಘಾಟಿಸಿದರು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನೂತನ ಕಚೇರಿಯ ಆವರಣದಲ್ಲಿ ನಾಯಕರು ಪಕ್ಷದ ಧ್ವಜವನ್ನು ಹಾರಿಸಿ, ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ನಂತರ ಸೋನಿಯಾ ಗಾಂಧಿ ಅವರು ಕಟ್ಟಡವನ್ನು ಉದ್ಘಾಟನೆ ಮಾಡಿದರು. ಕಟ್ಟಡದ ಪ್ರವೇಶದ್ವಾರದಲ್ಲಿ ರಿಬ್ಬನ್ ಕತ್ತರಿಸಲು ಕೈಜೋಡಿಸುವಂತೆ ಖರ್ಗೆ ಅವರಿಗೆ ಸೋನಿಯಾ ಗಾಂಧಿ ಹೇಳಿದರು.
ಎಐಸಿಸಿಯ ನೂತನ ಪ್ರಧಾನ ಕಚೇರಿಯು (ಇಂದಿರಾ ಗಾಂಧಿ ಭವನ) ತನ್ನ ಧೀಮಂತ ನಾಯಕರ ದೃಷ್ಟಿಕೋನವನ್ನು ಎತ್ತಿಹಿಡಿಯುವ ಪಕ್ಷದ ಧ್ಯೇಯವನ್ನು ಸಂಕೇತಿಸುತ್ತದೆ ಎಂದು ಈ ಹಿಂದೆ ಪಕ್ಷವು ಹೇಳಿತ್ತು.
'ಕಾಲದೊಂದಿಗೆ ಮುನ್ನಡೆಯಲು ಮತ್ತು ಹೊಸದನ್ನು ಅಪ್ಪಿಕೊಳ್ಳಲು ಇದು ಸಕಾಲ' ಎಂದು ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಹೇಳಿದರು.
ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 'ಇಂದಿರಾ ಗಾಂಧಿ ಭವನ'ದ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಪಕ್ಷದ ಈಗಿನ ಕಚೇರಿಯು ಅಕ್ಬರ್ ರಸ್ತೆಯ 24ನಲ್ಲಿ ಇದೆ. 1978ರಿಂದಲೂ ಇದೇ ಪ್ರಧಾನ ಕಚೇರಿಯಾಗಿದೆ. ಪಕ್ಷದ ಕೆಲವು ಘಟಕಗಳು ಇನ್ನು ಮುಂದೆಯೂ ಇಲ್ಲಿಂದಲೇ ಕಾರ್ಯ ನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.





