ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020ರ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಪ್ರಕರಣ ಕುರಿತ ತನಿಖಾ ವರದಿಯನ್ನು ವಿಶೇಷ ವಕೀಲ ಜಾಕ್ ಸ್ಮಿತ್ ನೇತೃತ್ವದ ತಂಡ ಮಂಗಳವಾರ ಬಿಡುಗಡೆ ಮಾಡಿದೆ.
ಟ್ರಂಪ್ ಅವರು ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸುವ ಕೆಲವೇ ದಿನಗಳ ಮುನ್ನ ಈ ವರದಿ ಬಿಡುಗಡೆಯಾಗಿದೆ.
'ಟ್ರಂಪ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನಾನು ಕೈಗೊಂಡಿರುವ ನಿರ್ಧಾರಗಳಿಗೆ ಬದ್ಧನಾಗಿದ್ದೇನೆ. ಜನರು ಟ್ರಂಪ್ ಅವರನ್ನು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಮಾಡದಿದ್ದರೆ ಅವರು ಶ್ವೇತಭವನವನ್ನು ಪ್ರವೇಶ ಮಾಡುತ್ತಿರಲಿಲ್ಲ' ಎಂದು ಹೇಳಿದರು.
ಟ್ರಂಪ್ ಅವರು ಅಮೆರಿಕದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡಲು ವಂಚನೆಯ ಮಾರ್ಗವನ್ನು ಅನುಸರಿಸಿದ್ದರು ಎಂದು ಸಾಕ್ಷ್ಯಗಳು ಹೇಳುತ್ತವೆ ಎಂದು ವರದಿಯು ಹೇಳಿದೆ.
'2020ರಲ್ಲಿ ಚುನಾವಣೆಯಲ್ಲಿ ಗೆಲ್ಲಲು ಟ್ರಂಪ್ ಅವರು ವಿಫಲ ಯತ್ನ ನಡೆಸಿದ್ದ ಬಗ್ಗೆ ವರದಿಯು ಗಮನ ಹರಿಸಿದೆ. ಆದರೆ, ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾದ ಕಾರಣ ಅವರ ವಿರುದ್ಧದ ಪ್ರಕರಣಗಳು ರದ್ದಾಗಿವೆ. ಈ ಬೆಳವಣಿಗೆಯು ಅಮೆರಿಕದ ನ್ಯಾಯಾಂಗ ಇಲಾಖೆಯ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಉಳಿಯಲಿದೆ' ಎಂದು ಹೇಳಿದೆ.




