ಜಿನೆವಾ: 'ಕೆರಿಬಿಯನ್ ದೇಶ 'ಹೈಟಿ'ಯಲ್ಲಿ ನಡೆದ ಗುಂಪು ಘರ್ಷಣೆಯಿಂದ ಆಂತರಿಕ ಸ್ಥಳಾಂತರವು ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷದಿಂದ ಈ ಪ್ರಮಾಣವು 10 ಲಕ್ಷದ ಗಡಿ ದಾಟಿದೆ' ಎಂದು ವಲಸೆ ಕುರಿತ ವಿಶ್ವಸಂಸ್ಥೆಯ ಏಜೆನ್ಸಿ ತಿಳಿಸಿದೆ.
'ಪೋರ್ಟ್ ಹೌ ಪ್ರಿನ್ಸ್‌ನಲ್ಲಿ ನಿರಂತರ ಗುಂಪು ಘರ್ಷಣೆಗೆ ಮತ್ತಷ್ಟು ಬೆಂಬಲ ನೀಡಿದ್ದರಿಂದ ವಲಸೆ ಪ್ರಮಾಣವು ದ್ವಿಗುಣಗೊಂಡಿತು.
ಇದರಿಂದ ಆರೋಗ್ಯ ಕ್ಷೇತ್ರ, ಆಹಾರ ಪೂರೈಕೆ ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಜನರು ಪರಿತಪಿಸುವಂತಾಯಿತು' ಎಂದು ಸಂಸ್ಥೆಯು ತಿಳಿಸಿದೆ.
ವಿಶ್ವದಲ್ಲೇ ಅತ್ಯಂತ ಬಡ ರಾಷ್ಟ್ರಗಳಲ್ಲಿ ಹೈಟಿ ಕೂಡ ಒಂದಾಗಿದೆ.
ಇತ್ತೀಚೆಗಿನ ಅಂಕಿಅಂಶದ ಪ್ರಕಾರ, '10.41 ಲಕ್ಷ ಮಂದಿ ಹಲವು ಬಾರಿ ಸ್ಥಳಾಂತರಗೊಂಡಿದ್ದಾರೆ. ಸಾಕಷ್ಟು ಮಾನವೀಯ ನೆರವಿನ ಹೊರತಾಗಿಯೂ ಅವರು ಜೀವನ ನಡೆಸಲು ಹೋರಾಟ ನಡೆಸುತ್ತಿದ್ದಾರೆ. ಸ್ಥಳಾಂತರಗೊಂಡವರ ಪೈಕಿ ಅರ್ಧದಷ್ಟು ಮಂದಿ ಮಕ್ಕಳೇ ಇದ್ದಾರೆ' ಎಂದು ಜಿನೆವಾ ಮೂಲದ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.




