ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ಇಪ್ಪತ್ತೈದನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನ ಬಯಲಾಟ ಫೆ. 22ಹಾಗೂ 23ರಂದು ಕೇಂದ್ರದ ಸಭಾಂಗಣದಲ್ಲಿ ಜರುಗಲಿದೆ.
22ರಂದು ಬೆಳಗ್ಗೆ 9ಕೆಕ ಶ್ರೀ ಮಹಾಗಣಪತಿ ಹೋಮ, ಭಜನೆ, ಶ್ರೀ ಸತ್ಯನಾರಾಯಣ ಪೂಜೆ, 10.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 2.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, 2.30ಕ್ಕೆ 'ವರಾಹಾವತಾರ'ಯಕ್ಷಗಾನ ಬಯಲಾಟ, ಸಂಜೆ 6ಕ್ಕೆ ಶ್ರೀದುರ್ಗಾಪೂಜೆ ನಡೆಯುವುದು.
23ರಂದು ಬೆಳಗ್ಗೆ 10.30ಕ್ಕೆ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರ ಯಕ್ಷಗಾನ ತಿರುಗಾಟದ 50ನೇ ವರ್ಷದ ನೆನಪಿನ ಅಂಗವಾಗಿ ಸಾಧಕರು ಹಾಗೂ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಯಕ್ಷಗಾನ ಅಕಾಡಮಿ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ಪಡ್ರೆ ಚಂದು ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್ ಅವರಿಗೆ ಪ್ರದಾನ ಮಾಡಲಾಗುವುದು. ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ತೆಂಕಬೈಲು ಪ್ರಶಸ್ತಿ, ಕೆ. ಗೋವಿಂದ ಭಟ್ ಅವರಿಗೆ ಚೇವಾರು ಪ್ರಶಸ್ತಿ, ಪ್ರಸಿದ್ಧ ಹಾಸ್ಯಗಾರ ನೆಲ್ಲಿಕಟ್ಟೆ ನಾರಾಯಣ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ಪುಂಡುವೇಷಧಾರಿ ಗೋಪಾಲ ಭಟ್ ಗುಂಡಿಮೂಲೆ ಅವರಿಗೆ ಬಲಿಪ ಪ್ರಶಸ್ತಿ, ದಯಾನಂದ ಶೆಟ್ಟಿ ಜೆಪ್ಪು ಅವರಿಗೆ ಮಾಯಿಲೆಂಗಿ ಪ್ರಶಸ್ತಿ, ರಮೇಶ್ ಶೆಟ್ಟಿ ಬಾಯಾರು ಅವರಿಗೆ ದೇವಕಾನ ಪ್ರಶಸ್ತಿ, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರಿಗೆ ಕಲಾ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಹಾಗೂ ವಿವಿಧ ಸಂಘಟನೆಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗುವುದು. ಮಧ್ಯಾಹ್ನ 1ಗಂಟೆಗೆ ಪೂರ್ವರಂಗ, 2.30ಕ್ಕೆ ಯಕ್ಷಗಾನ ಬಯಲಾಟ ನಡೆಯುವುದು.





