HEALTH TIPS

ಕನ್ನಡ ಬಲ್ಲ ಸಿಬಂದಿ ನೇಮಕದ ಸಂಖ್ಯೆಯನ್ನು ಕನಿಷ್ಠಗೊಳಿಸಲು ಆದೇಶ: ಗಡಿನಾಡ ಕನ್ನಡಿಗರ ಉದ್ಯೋಗದ ಮೂಲಭೂತ ಹಕ್ಕು ಕಸಿದುಕೊಳ್ಳುತ್ತಿರುವ ಸರ್ಕಾರ

ಕಾಸರಗೋಡು: ಮಲಯಾಳೀಕರಣದ ಭೀತಿಯ ನಡುವೆ ಕಾಲ ಕಳೆಯುತ್ತಿರುವ ಕಾಸರಗೋಡಿನ ಕನ್ನಡಿಗರಿಗೆ ಸರ್ಕಾರ ಹೊರಡಿಸಿರುವ ಹೊಸ ಆದೇಶದಿಂದ ಸರ್ಕಾರಿ ಉದ್ಯೋಗವೂ ಕನಸಿನ ಮಾತಾಗಲಿದೆ.

ಈ ಮೂಲಕ ಕನ್ನಡಿಗರ ಉದ್ಯೋಗವನ್ನು ಕಸಿಯಲೂ ಸರ್ಕಾರ ಮುಂದಡಿಯಿಟ್ಟಿದೆ. ಇದುವರೆಗೆ ಜಾರಿಯಲ್ಲಿದ್ದ ಕನ್ನಡ ಬಲ್ಲ ಸಿಬಂದಿ ನೇಮಕದ ಸಂಖ್ಯೆಯನ್ನು ಕನಿಷ್ಠಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದುರಿ ಈ ಬಗ್ಗೆ ಆದೇಶವನ್ನೂ ಹೊರಡಿಸಿದೆ. ಆದೇಶ ಜಾರಿಯಾದಲ್ಲಿ ಕಾಸರಗೋಡಿನಲ್ಲಿ ಕನ್ನಡದ ಅರ್ಜಿಗಳೂ ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆ ಇದೆ.

ಸರ್ಕಾರಿ ಕಚೇರಿಗಳಿಗೆ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯನ್ನು ನೋಡಿ ಇನ್ನು ಮುಂದೆ ಕನ್ನಡ ಬಲ್ಲ ಸಿಬ್ಬಂದಿ ಹುದ್ದೆ ಮಂಜೂರು ಮಾಡಿದರೆ ಸಾಕು ಎಂಬ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ. ಪರಿಣಾಮವಾಗಿ ಕನ್ನಡಿಗರಿಗೆ ಮೀಸಲಿರಿಸಿದ್ದ ಸರ್ಕಾರಿ ಹುದ್ದೆ ಅವರ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.  ಇದು ಪರೋಕ್ಷವಾಗಿ ಕನ್ನಡಿಗರು ಸರ್ಕಾರದ ಕೆಲವೊಂದು ಸವಲತ್ತುಗಳಿಂದ ವಂಚಿತರಾಗುವಂತೆ ಮಾಡಲಿದೆ. ಅಲ್ಲದೆ ಇನ್ನು ಮುಂದೆ ಕನ್ನಡಿಗರು ಅರ್ಜಿ ಬರೆಯಲು ಮಲಯಾಳ ಅಥವಾ ಇಂಗ್ಲಿಷ್ ಬಲ್ಲವರಲ್ಲಿ ಅಂಗಲಾಚುವ ಪರಿಸ್ಥಿತಿ ತಲೆದೋರಲಿದೆ. ಅರ್ಜಿಗಳ ಸಂಖ್ಯೆಯನ್ನು ನೋಡಿ ಭಾಷಾ ಅಲ್ಪ ಸಂಖ್ಯಾಕ ಕನ್ನಡ-ಮಲಯಾಳ ಯಾ ತಮಿಳು-ಮಲಯಾಳ ಕ್ಲರ್ಕ್ ಹುದ್ದೆಯ ಅಗತ್ಯದ ಕುರಿತು ಪರಿಶೀಲಿಸಿ, ಎಷ್ಟು ಹುದ್ದೆ ಅಗತ್ಯವಿದೆ ಎಂದು ಒಂದು ತಿಂಗಳೊಳಗೆ ಮಾಹಿತಿ ನೀಡುವಂತೆ ಇಲಾಖೆಗೆ ಸೂಚಿಸಿದೆ.

ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನಲ್ಲಿ ಸಂವಿಧಾನಾತ್ಮಕವಾಗಿ ಕನ್ನಡಿಗರಿಗೆ ಕನ್ನಡದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಅವುಗಳನ್ನು ನೋಡಿ ಪರಿಗಣಿಸುವ ಕನ್ನಡ ಬಲ್ಲ ಸಿಬಂದಿ ನೇಮಕ ಮಾಡದೆ ಸರ್ಕಾರ ಕನ್ನಡಿಗರನ್ನು ಅವಗಣಿಸುತ್ತಿದೆ.  

ಕೆಲವು ಕಡೆ ಸಿಬಂದಿ ತಮಗೆ ಕನ್ನಡ ಬರುವುದಿಲ್ಲ ಎಂದು ಸಾರಾಸಗಟಾಗಿ ತಿಳಿಸುತ್ತಾರೆ. ಇದರಿಂದ ಕನ್ನಡಿಗರು ಅನಿವಾರ್ಯವಾಗಿ ಅನ್ಯರ ಸಹಾಯ ಪಡೆದು ಮಲಯಾಳ ಅಥವಾ ಆಂಗ್ಲ ಭಾಷೆಯಲ್ಲೇ ಅರ್ಜಿ ಯಾ ಕಡತ  ಸಿದ್ಧ ಪಡಿಸಿ ಸಲ್ಲಿಸುವವರಿದ್ದಾರೆ. ಇದರಿಂದ ಸಹಜವಾಗಿಯೇ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಈಗ ಸರ್ಕಾರ ಇದನ್ನೇ ನೆಪವಾಗಿರಿಸಿ ಕನ್ನಡ-ಮಲಯಾಳ ಉಭಯ ಭಾಷೆ ಬಲ್ಲ ಸಿಬಂದಿಯ ಹುದ್ದೆ ಸಂಖ್ಯೆ ಕಡಿತ ಮಾಡಲು ಹೊರಟಿದೆ.

ಕನ್ನಡಿಗರ ಮೇಲೆ ಬಲವಂತದ ಮಲಯಾಳ ಹೇರಿಕೆಗೆ ಸರ್ಕಾರ ಹಿಂದಿನಿಂದಲೂ ಪ್ರಯತ್ನ ನಡೆಸುತ್ತಾ ಬಂದಿದ್ದು, ಕನ್ನಡದ ಅರ್ಜಿಗಳ ಸಂಖ್ಯೆ ಕುಸಿದಿರುವ ನೆಪದಲ್ಲಿ ಕಾಸರಗೋಡಿನಲ್ಲಿ ಕನ್ನಡ ಬಲ್ಲ ಸಿಬ್ಬಂದಿ ನೇಮಕ ಕನಿಷ್ಠಗೊಳಿಸುವ ಮೂಲಕ ತನ್ನ ಒಂದು ಪ್ರಯತ್ನದಲ್ಲಿ ಯಶಸ್ಸು ಸಾಧಿಸುವ ಹಂತಕ್ಕೆ ತಲುಪಿದೆ.


ಕನ್ನಡಿಗರ ನೇಮಕಾತಿಯಲ್ಲಿ ನಿರ್ಲಕ್ಷ್ಯ:

ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಕನ್ನಡ ಬಲ್ಲವರಿಗೆ ನೀಡಬೇಕು ಎಂದು 2013ರಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲವರು ಶೇ. 50ರಷ್ಟು ಬೇಕಾಗಿದ್ದರೂ ಶೇ. 10ರಷ್ಟೂ ಕನ್ನಡಿಗರ ನೇಮಕಾತಿ ನಡೆದಿಲ್ಲ. ಈ ಎರಡು ತಾಲೂಕುಗಳಲ್ಲಿರುವ 19 ಗ್ರಾಮ ಪಂಚಾಯತ್‍ಗಳಲ್ಲಿ 19 ಮಂದಿ ಕನ್ನಡ ಬಲ್ಲವರು ಇರಬೇಕು. ಆದರೆ ಇಲ್ಲಿ ಬೆರಳೆಣಿಕೆಯ ಮಂದಿಯಷ್ಟೇ ಇದ್ದಾರೆ. ಕಾಸರಗೋಡಿನ ಕಂದಾಯ ಇಲಾಖೆಯಲ್ಲಿ 52 ಮಂದಿ, ಕೃಷಿ ಇಲಾಖೆಯಲ್ಲಿ 16 ಮಂದಿ ಕನ್ನಡ ಬಲ್ಲವರು ಇರಬೇಕು. ಆದರೆ ಪೂರ್ಣ ಪ್ರಮಾಣದಲ್ಲಿ ಇದು ಈಡೇರಿಲ್ಲ. ಹಲವು ಇಲಾಖೆಗಳಲ್ಲಿ ಖಾಲಿ ಇರುವ ಕನ್ನಡ ಬಲ್ಲವರ ಹುದ್ದೆಗಳ ಅಂಕಿ ಅಂಶವನ್ನು ಲೋಕಸೇವಾ ಆಯೋಗ ಆಯಾ ಇಲಾಖೆಗೆ ಸಲ್ಲಿಸುತ್ತಿಲ್ಲ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 108 ಮಂದಿಯನ್ನು ರ್ಯಾಂಕ್ ಪಟ್ಟಿಯಲ್ಲಿ ಸೇರಿಸಲಾಗಿದ್ದರೂ ಈ ತನಕ ನೇಮಕ ಆಗಿಲ್ಲ. ಕೆಲವು ಇಲಾಖೆಗಳಲ್ಲಿ ಕನ್ನಡ ಬಲ್ಲ ಹುದ್ದೆಗಳಾಗಿ ಪರಿವರ್ತಿಸಬೇಕಿದ್ದರೂ ಅದೂ ನಡೆದಿಲ್ಲ.

ಹೋರಾಟ ಅನಿವಾರ್ಯ:

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ 2013ರಲ್ಲಿ ನೇಮಿಸಿದ ಪ್ರಭಾಕರನ್ ಆಯೋಗವು ಸರ್ಕಾರಿ ಹುದ್ದೆಯಲ್ಲಿ ಭಾಷಾ ಅಲ್ಪಸಂಖ್ಯಾಕರನ್ನು ಪರಿಗಣಿಸುವಂತೆ ಹಾಗೂ  ಎಲ್ಲ ಸರ್ಕಾರಿ ಹುದ್ದೆಗಳಲ್ಲಿ ಕನ್ನಡ ಬಲ್ಲವರನ್ನು ನೇಮಿಸಬೇಕು. ಭಾಷಾ ಅಲ್ಪಸಂಖ್ಯಾಕರನ್ನು ದೂರವಿಟ್ಟು ಕಾಸರಗೋಡಿನ ಸಮಗ್ರ ಅಭಿವೃದ್ಧಿ ಅಸಾಧ್ಯವೆಂದು ವರದಿಯಲ್ಲಿ ತಿಳಿಸಿತ್ತು. ಆದರೆ ಇಂದು ಸರ್ಕಾರ ಪ್ರಭಾಕರನ್ ವರದಿಗೆ ಮಾನ್ಯತೆ ನೀಡದೆ, ಸಂಪೂರ್ಣ ವರದಿಗೆ ಎಳ್ಳುನೀರು ಬಿಟ್ಟಿದೆ. 

ಗಡಿನಾಡ ಕನ್ನಡಿಗರಿಗಿರುವ ಸಂವಿಧಾನಾತ್ಮಕ ಹಕ್ಕಿನಬಗ್ಗೆ ಇಲ್ಲಿನ ಭಾಷಾ ಅಲ್ಪಸಂಖ್ಯಾತರು ಅರಿತುಕೊಳ್ಳುವುದರ ಜತೆಗೆ ಸರ್ಕಾರಕ್ಕೆ ಸಲ್ಲಿಸುವ ಅರ್ಜಿಗಳನ್ನು ಕನ್ನಡದಲ್ಲೇ ಸಲ್ಲಿಸುವಂತಾಗಬೇಕು. ಅರ್ಜಿ ಸ್ವೀಕರಿಸಲು ನಿರಾಕರಿಸಿದಲ್ಲಿ ಪ್ರತಿ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಕನ್ನಡಿಗರ ಸರ್ಕಾರಿ ಉದ್ಯೋಗಕ್ಕೆ ಧಕ್ಕೆಯುಂಟಾಗಲಿರುವ ಇಂತಹ ಅದೇಶದಿಂದ ಪಾರಾಗಲು ಸಮಸ್ತ ಕನ್ನಡಿಗರು ಒಟ್ಟಾಗಿ ಪ್ರತಿಭಟನೆ ನಡೆಸುವುದೊಂದೇ ಪರಿಹಾರ ಎಂಬುದಾಗಿ ಸರ್ಕಾರಿ ನಿವೃತ್ತ ಅಧಿಕಾರಿಯೊಬ್ಬರು ತಿಳಿಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries