ನವದೆಹಲಿ: 'ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಪ್ರಕಾರ ತಂದೆಯ ಅಂತಿಮ ಸಂಸ್ಕಾರ ನಡೆಸಲು ಅನುಮತಿ ಕೋರಿ ಅವರ ಮಗ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಬಂದಿದೆ. ಇದು ಅತ್ಯಂತ ನೋವಿನ ಸಂಗತಿ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಬೇಸರ ವ್ಯಕ್ತಪಡಿಸಿದೆ.
'ಛತ್ತೀಸಗಢದ ಗ್ರಾಮವೊಂದರ ಈ ಸಮಸ್ಯೆಯನ್ನು ಅಲ್ಲಿನ ಗ್ರಾಮಾಡಳಿತ, ಸರ್ಕಾರ ಮತ್ತು ಹೈಕೋರ್ಟ್‌ನಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ವಿಷಾದಿಸುತ್ತೇವೆ' ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ಹೇಳಿತು.
'ನನ್ನ ತಂದೆ ಪಾದ್ರಿಯಾಗಿದ್ದು, ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ನರಿಗೆಂದು ಗುರುತಿಸಲಾಗಿರುವ ಕಡೆ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು' ಎಂದು ಕೋರಿ ರಮೇಶ್ ಬಘೇಲ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ರಮೇಶ್ ಅವರು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
'ನಿರ್ದಿಷ್ಟ ಗ್ರಾಮದಲ್ಲಿ ವಾಸಿಸುವ ವ್ಯಕ್ತಿಯನ್ನು ಆ ಗ್ರಾಮದಲ್ಲಿ ಏಕೆ ಸಮಾಧಿ ಮಾಡಬಾರದು? ಜನವರಿ 7ರಿಂದ ಅವರ ಪಾರ್ಥಿವ ಶರೀರವನ್ನು ಶವಾಗಾರದಲ್ಲಿ ಇಡಲಾಗಿದೆ. ವ್ಯಕ್ತಿಯೊಬ್ಬರು ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಅನುಮತಿ ಕೋರಿ ಸುಪ್ರೀಂ ಕೋರ್ಟ್‌ವರೆಗೂ ಬರಬೇಕಾದ ಸ್ಥಿತಿ ಬಂದಿದೆ ಎಂದು ಹೇಳುವುದಕ್ಕೆ ಬೇಸರವಾಗುತ್ತದೆ, ಕ್ಷಮಿಸಿ' ಎಂದು ಪೀಠ ಹೇಳಿತು.
'ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಪೊಲೀಸರೂ ಕಾನೂನು ಕ್ರಮದ ಬೆದರಿಕೆ ಹಾಕಿದರು' ಎಂದು ಅರ್ಜಿದಾರ ಬಘೇಲ್ ಪೀಠಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, 'ಗ್ರಾಮದಲ್ಲಿ ಕ್ರೈಸ್ತರಿಗೆ ಸ್ಮಶಾನವಿಲ್ಲ ಮತ್ತು ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗ್ರಾಮದಿಂದ 20 ಕಿ.ಮೀ. ದೂರದಲ್ಲಿ ಮಾಡಬಹುದು' ಎಂದರು.
ಬಘೇಲ್ ಪರ ವಾದಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, 'ಬಘೇಲ್ ಅವರ ಕುಟುಂಬದ ಕೆಲ ಸದಸ್ಯರನ್ನು ಗ್ರಾಮದಲ್ಲಿಯೇ ಸಮಾಧಿ ಮಾಡಲಾಗಿದೆ ಎಂಬ ಮಾಹಿತಿ ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿದೆ' ಎಂದು ಗಮನ ಸೆಳೆದರು.
'ಮೃತ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರು. ಹೀಗಾಗಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ' ಎಂದು ಅವರು ಹೇಳಿದರು.
ಅರ್ಜಿದಾರ ರಮೇಶ್ ಅವರು ತನ್ನ ತಂದೆಯ ಮೂಲ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಹಟ ಮಾಡುತ್ತಿದ್ದಾರೆ. ಈ ಮೂಲಕ ಅವರು ಬುಡಕಟ್ಟು ಹಿಂದೂಗಳು ಮತ್ತು ಬುಡಕಟ್ಟು ಕ್ರಿಶ್ಚಿಯನ್ನರ ನಡುವೆ ಅಶಾಂತಿ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮೆಹ್ತಾ ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ವಕೀಲ ಗೊನ್ಸಾಲ್ವಿಸ್ ಅವರು, 'ಇದು ಕ್ರಿಶ್ಚಿಯನ್ನರನ್ನು ಹೊರದಬ್ಬುವ ಯತ್ನವಾಗಿದೆ' ಎಂದರು.
ಸಮಸ್ಯೆಯನ್ನು ಭಾವನೆಗಳ ಆಧಾರದಲ್ಲಿ ನಿರ್ಧರಿಸಬಾರದು. ಈ ಕುರಿತು ವಿವರವಾಗಿ ವಾದಿಸಲು ಸಿದ್ಧ ಇರುವುದಾಗಿ ಮೆಹ್ತಾ ಈ ವೇಳೆ ತಿಳಿಸಿದರು. ಬಳಿಕ ಪೀಠವು ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.





