ನವದೆಹಲಿ: 'ದೇಶದ ಇತಿಹಾಸದ ಮೊದಲ ಕರಡು ವಸಾಹತುಶಾಹಿಗಳ ವಿಕೃತ ದೃಷ್ಟಿಕೋನದಿಂದ ಮೂಡಿದೆ. ವಸಾಹತುಶಾಹಿ ಮನಃಸ್ಥಿತಿ ಮತ್ತು ಪರಂಪರೆಯಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕು' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸೋಮವಾರ ಹೇಳಿದರು.
ಸಂಕುಚಿತ ಮನೋಭಾವದ ವ್ಯಕ್ತಿಗಳು ಭಾರತೀಯರಿಗೆ ಒಳಗೊಳ್ಳುವಿಕೆ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಎಂದರು.
ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ 'ನಂದಲಾಲ್ ನುವಾಲ್ ಸೆಂಟರ್ ಆಫ್ ಇಂಡಾಲಜಿ'ಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
'ಇಂದು ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳನ್ನು ಭಾರತೀಯ ಸಂಸ್ಕೃತಿಯ ದೃಷ್ಟಿಕೋನದಿಂದ ನೋಡಿದರೆ, ತ್ವರಿತವಾಗಿ ಪರಿಹಾರ ಸಿಗುತ್ತದೆ' ಎಂದು ಪ್ರತಿಪಾದಿಸಿದರು.





