ನವದೆಹಲಿ: ದೆಹಲಿ ಏಮ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ರಸ್ತೆಗಳು, ಫುಟ್‌ಪಾತ್‌ಗಳು, ಸುರಂಗಮಾರ್ಗಗಳಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಆದರೆ, ದೆಹಲಿ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಅಸೂಕ್ಷ್ಮತೆ ಪ್ರದರ್ಶಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ರೋಗದಿಂದ ಬಳಲುತ್ತಿರುವ ಜನರು, ಕೊರೆಯುವ ಚಳಿಯಲ್ಲಿಯೂ ಆಸ್ಪತ್ರೆಯ ಹೊರಗೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದಾರೆ. ಆದರೆ ದೆಹಲಿ ಸರ್ಕಾರ ಅಥವಾ ಕೇಂದ್ರ ಸರ್ಕಾರವು ಈ ಬಗ್ಗೆ ಗಮನಹರಿಸಿಲ್ಲ ಯಾಕೆ, ಅವರ ನೋವುಗಳಿಗೆ ಸ್ಪಂದಿಸುವ ಸೂಕ್ಷ್ಮತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಬಾ ದೂರದ ಊರುಗಳಿಂದ ಚಿಕಿತ್ಸೆಗಾಗಿ ಬಂದು ಆಸ್ಪತ್ರೆಯ ಹೊರಗೆ ಹೊಸ ಭರವಸೆಯೊಂದಿಗೆ ಕಾದು ಕುಳಿತ ನೂರಾರು ಮಂದಿಯನ್ನು ಭೇಟಿ ಮಾಡಿದೆ. ಅವರ ಸಂಕಷ್ಟಗಳನ್ನು ಆಲಿಸಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ದೆಹಲಿ ಮತ್ತು ಕೇಂದ್ರ ಸರ್ಕಾರ ಸಾರ್ವಜನಿಕರ ನೋವುಗಳಿಗೆ ಸ್ಪಂದಿಸುತ್ತಿಲ್ಲ. ಅವರ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರೋಗಿಗಳ ಕುಟುಂಬವನ್ನು ಭೇಟಿ ಮಾಡಿ ಕಷ್ಟ ಆಲಿಸಿದ ರಾಹುಲ್ ಗಾಂಧಿ




