ಮಂಜೇಶ್ವರ: ಒಂದು ಹೆಣ್ಣು ಛಲ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ದೇವರಿಗೆ ಸಮ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ. ತಾಯಿಯಲ್ಲಿರುವ ಎಲ್ಲಾ ಗುಣ ನಡತೆ ಮಕ್ಕಳಲ್ಲಿ ಸಂಸ್ಕಾರ ಮೂಡಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಮಾತಾನಂದಮಯೀ ನುಡಿದರು.
ಅವರು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರಂಭದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಮಾತೃ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ತಾಯಿ ಎಂದರೆ ಪಾವಿತ್ರ್ಯಳು ಅವರಲ್ಲಿ ಸಂಸ್ಕಾರ, ಅಧ್ಯಾತ್ಮಿಕ, ಚಿಂತನೆ ಮನೆ ಮಾಡಿದೆ. ಅದನ್ನ ಅರಿತು ಮಕ್ಕಳು ಮುಂದುವರಿದರೆ ಜೀವನ ಪಾವನವಾಗುತ್ತೆ ಎಂದು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದರು.
ಪಾರ್ವತಿ ಶ್ರೀಧರ ಭಟ್ ಮಾವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೈಗೋಳಿ ಸಾಯಿನಿಕೇತನ ಸೇವಾಶ್ರಮದ ಡಾ. ಶಾರದಾ ಉದಯಕುಮಾರ್, ನಿವೃತ ಅಧ್ಯಾಪಿಕೆ ಜಯಲಕ್ಷ್ಮಿ ಕಾರಂತ, ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ, ಕಣ್ಣೂರು ವಿಭಾಗ ಸಂಯೋಜಕಿ ಮೀರಾ ಆಳ್ವ, ನಿವೃತ ಅಧ್ಯಾಪಿಕೆ ಯಮುನಾ ಎ. ಕುಂಬಳೆ, ಮೀನಾಕ್ಷೀ ಸಿ.ಕೆ ಚಿಪ್ಪಾರ್ ಲಾಲ್‍ಬಾಗ್, ರತ್ನಾವತಿ ಎಸ್ ಭಂಡಾರಿ ದಡ್ಡಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪ್ರಸಾದ ವಿತರಣೆಗೆ ಕೈಚೀಲದ ವ್ಯವಸ್ಥೆಯನ್ನು ಸೇವಾ ರೂಪದಲ್ಲಿ ವಿತರಿಸಿದ ಸೆವೆಂತ್ ಹೀವೆನ್ ತೊಕ್ಕೊಟ್ಟುವಿನ ದೀಪ್ತಿ ದೀಪಕ್ ಶೆಟ್ಟಿ ಪರವಾಗಿ ಬಂಧು ವಿಮಲ ವಿ. ಶೆಟ್ಟಿ ಇವರು ನೀಡಿದರು. ಇವರನ್ನು ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಸಮಿತಿ ಪರವಾಗಿ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕು. ಅದ್ವಿತಾ ಸಂತಡ್ಕ ಪ್ರಾರ್ಥನೆ ಹಾಡಿದರು. ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಸಂತಡ್ಕದ ಕಾರ್ಯದರ್ಶಿ ಆಶಾಲತಾ ಸ್ವಾಗತಿಸಿ, ಯಶ್ವಿತಾ ಉದಯ ಶೆಟ್ಟಿ ಹಾಗೂ ಅಕ್ಷತಾ ಅಶೋಕ್ ಶೆಟ್ಟಿ ನಿರೂಪಿಸಿದರು. ಕು. ಅರ್ಪಿತಾ ರೈ ಸಂತಡ್ಕ ವಂದಿಸಿದರು. ಬಳಿಕ ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಅರಸು ಸಂಕಲ ಸೇವಾ ಬಳಗ ಸಂತಡ್ಕ ಪ್ರಾಯೋಜಕತ್ವದಲ್ಲಿ ಚಾ ಪರ್ಕ ಕಲಾವಿದೆರ್ ಕುಡ್ಲ ಇವರಿಂದ "ಏರ್ಲಾ ಗ್ಯಾರಂಟಿ ಅತ್ತ್" ತುಳು ನಾಟಕ ಪ್ರದರ್ಶನಗೊಂಡಿತು.

.jpg)
.jpg)
