ಲಂಡನ್: 'ಕೃತಕ ಬುದ್ಧಿಮತ್ತೆಯಿಂದ ದೇಶದಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಶಿಕ್ಷಕರಿಂದ ಹಿಡಿದು, ಸಣ್ಣ ಉದ್ಯಮಗಳ ತನಕ ದಾಖಲೆಗಳನ್ನು ಸುಲಭವಾಗಿ ನಿರ್ವಹಿಸಬಹುದು' ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಿಳಿಸಿದರು.
'ಕೃತಕ ಬುದ್ಧಿಮತ್ತೆ ಕ್ಷೇತ್ರದ ಅವಕಾಶಗಳ ಕ್ರಿಯಾಯೋಜನೆ' ಬಿಡುಗಡೆಗೊಳಿಸಿ ಮಾತನಾಡಿದ ಅವರು, 'ಎ.ಐನಿಂದ ದುಡಿಯುವ ವರ್ಗದ ಜನರ ಜೀವನದಲ್ಲಿ ವ್ಯಾಪಕ ಬದಲಾವಣೆ ಆಗಲಿದೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಾದ ವಾಂಟೇಜ್ ಡೇಟಾ ಸೆಂಟರ್, ಎನ್‌ಸ್ಕೇಲ್ ಹಾಗೂ ಕಿಂಡ್ರಿಲ್, ದೇಶದಲ್ಲಿ 14 ಶತಕೋಟಿ ಪೌಂಡ್ (₹14.7 ಲಕ್ಷ ಕೋಟಿ) ಹೂಡಿಕೆ ಮಾಡಲು ನಿರ್ಧರಿಸಿವೆ. ಇದರಿಂದ 13,250 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕ್ಷೇತ್ರದಲ್ಲಿ ಬ್ರಿಟನ್ ಜಾಗತಿಕ ನಾಯಕತ್ವ ಸ್ಥಾನ ವಹಿಸಲಿದೆ' ಎಂದು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.




