HEALTH TIPS

ಸಿಖ್ ವಿರೋಧಿ ದಂಗೆ: ಸಜ್ಜನ್ ಕುಮಾರ್ ವಿರುದ್ಧದ ತೀರ್ಪು ಮುಂದೂಡಿದ ದೆಹಲಿ ಕೋರ್ಟ್‌

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ದಂಗೆ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ ವಿರುದ್ಧ ತೀರ್ಪನ್ನು ದೆಹಲಿ ನ್ಯಾಯಾಲಯ ಮಂಗಳವಾರ ಮುಂದೂಡಿದೆ.

ಪ್ರಕರಣದ ಆದೇಶವನ್ನು ಪ್ರಕಟಿಸಲು ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಮಂಗಳವಾರ ದಿನಾಂಕ ನಿಗದಿಪಡಿಸಿದ್ದರು.

ಆದರೆ ಮತ್ತಷ್ಟು ಕೆಲ ಪ್ರಮುಖ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲು ಇಚ್ಛಿಸಿದ ಪ್ರಾಸಿಕ್ಯೂಷನ್‌ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಜ. 31ರವರೆಗೂ ಕಲಾಪ ಮುಂದೂಡಿತು.

ಸಿಖ್ ವಿರೋಧಿ ದಂಗೆಯಲ್ಲಿ ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು 1984ರ ನ. 1ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್ ಪ್ರಮುಖ ಆರೋಪಿಯಾಗಿದ್ದು, ಸದ್ಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇವರನ್ನು ಇಡಲಾಗಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಇವರನ್ನು ವಿಚಾರಣೆಗೆ ಹಾಜರುಪಡಿಸಲಾಗಿತ್ತು.

ಪಂಜಾಬಿ ಬಾಗ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 2021ರ ಡಿ. 16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

'ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ಸಿಖ್ಖರನ್ನೇ ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳನ್ನು ಹಿಡಿದ ದೊಡ್ಡ ಗುಂಪು ಲೂಟಿ, ದಂಗೆ ಮತ್ತು ಬೆಂಕಿ ಹಚ್ಚಿ ಸಿಖ್ ಸಮುದಾಯಕ್ಕೆ ಸೇರಿದವರ ಆಸ್ತಿಯನ್ನು ನಾಶಪಡಿಸಲಾರಂಭಿಸಿತು. ಆಗ ಜಸ್ವಂತ್‌ ಸಿಂಗ್ ಅವರ ಮನೆಗೆ ನುಗ್ಗಿದ ಗುಂಪು, ಅವರನ್ನು ಹಾಗೂ ಮಗನನ್ನು ಹತ್ಯೆಗೈದು, ಮನೆಯನ್ನು ಲೂಟಿ ಮಾಡಿತು' ಎಂದು ದೂರ ನೀಡಿದ ಜಸ್ವಂತ್ ಅವರ ಪತ್ನಿ ಸಾಕ್ಷಿ ನುಡಿದಿರುವುದಾಗಿ ಪ್ರಾಸಿಕ್ಯೂಷನ್ ಅವರು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸಜ್ಜನ್ ಕುಮಾರ್ ಅವರೊಬ್ಬರೇ ಅಪರಾಧಿ ಎಂದು ಹೇಳಲು ಸಾಕ್ಷ್ಯಗಳ ಕೊರತೆ ಇದೆ. ಬದಲಿಗೆ ಇಡೀ ಕೃತ್ಯವನ್ನು ಗುಂಪು ನಡೆಸಿದೆ ಎಂದೆನ್ನಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಅದರ ಆಧಾರದ ಮೇಲೆ ಆದೇಶ ಪ್ರಕಟಿಸಲು ದಿನಾಂಕ ನಿಗದಿಪಡಿಸಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries