ಬದಿಯಡ್ಕ: ಕಾಂಚಿ ಚಂದ್ರಶೇಖರೇಂದ್ರ ಸರಸ್ವತೀ ವೇದಪಾಠಶಾಲೆ ನೀರ್ಚಾಲು ಇವರ ವತಿಯಿಂದ ಕಿಳಿಂಗಾರಿನಲ್ಲಿ ನಿರ್ಮಾಣಗೊಳ್ಳಲಿರುವ ವೇದಪಾಠ ಶಾಲೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಶುಕ್ರವಾರ ಬೆಳಗ್ಗೆ ಜರಗಿತು. ಪರಮಪೂಜ್ಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಾದ ಮಂತ್ರಾಕ್ಷತೆಗಳನ್ನಿತ್ತು ಹರಸಿದರು. ವೇದವಿದ್ಯೆಯನ್ನು ಮುಂದಿನ ತಲೆಮಾರಿಗೆ ಒದಗಿಸಿಕೊಡುವಲ್ಲಿ ಮಹತ್ತರವಾದ ಹೆಜ್ಜೆಯನ್ನು ಇಟ್ಟು ಮುಂದುವರಿಯುತ್ತಿರುವ ಕಾರ್ಯಕ್ಕೆ ದೇವತಾನುಗ್ರಹ ಸದಾ ಇರಲಿ. ನೆನೆದ ಕಾರ್ಯವು ನಡೆದು ಸುಂದರ ಭವ್ಯ ಕಟ್ಟಡ ಅತಿಶೀಘ್ರದಲ್ಲಿ ತಲೆಯೆತ್ತಲಿ. ವೇದ, ಬ್ರಾಹ್ಮಣ್ಯದ ಮೂಲಕ ಸನಾತನ ಪರಂಪರೆಗೆ ಭದ್ರವಾದ ಅಡಿಗಟ್ಟು ಲಭಿಸಲಿ ಎಂದು ಅನುಗ್ರಹ ಮಾತುಗಳನ್ನಾಡಿದರು.
ವೇದಮೂರ್ತಿ ಅಮೈ ಅನಂತ ಕೃಷ್ಣ ಘನಪಾಠಿಗಳು, ವೇದಮೂರ್ತಿ ಜಯರಾಮ ಕಾರಂತ, ವೇದಮೂರ್ತಿ ಶಂಭು ಭÀಟ್ ಚಾವಡಿಬಾಗಿಲು ನೇತೃತ್ವದಲ್ಲಿ ಭೂಮಿಪೂಜೆ ನಡೆಯಿತು. ವೇದಬ್ರಹ್ಮ ವಿಶ್ವೇಶ್ವರ ಭಟ್ ಪಳ್ಳತ್ತಡ್ಕ ಇವರ ಪತ್ನಿ ಜಗದಂಬಾ ಹಾಗೂ ಶಿಷ್ಯವೃಂದದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಾಸ್ತುತಜ್ಞ ಪ್ರಸನ್ನ ಮುಳಿಯಾಲ ಹಾಗೂ ಇಂಜಿನಿಯರ್ ಅಜಿತ್ ವಿ ಶರ್ಮ ಮದನಗುಳಿ ಕುಂಬಳೆ ಇವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದದವರ ನೇತೃತ್ವದಲ್ಲಿ ನೂತನ ಕಟ್ಟಡ ನಿರ್ಮಾಣಕಾರ್ಯ ನಡೆಯಲಿದೆ.




