ಅಗರ್ತಲಾ: ಬಾಂಗ್ಲಾದೇಶ ಸರ್ಕಾರವು ದೇಶದ ಗಡಿಯಲ್ಲಿ ಬೃಹತ್ ಒಡ್ಡು ನಿರ್ಮಿಸಲು ಮುಂದಾಗಿದ್ದು, ಈ ವಿಷಯವನ್ನು ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ವಿಧಾನಸಭೆಯಲ್ಲಿ ಬುಧವಾರ ಭರವಸೆ ನೀಡಿದರು.
ಉನಕೋಟಿ ಜಿಲ್ಲೆಯ ಕೈಲಾಶ್‌ಹರ್ ಉಪವಿಭಾಗದಲ್ಲಿ ಬಾಂಗ್ಲಾದೇಶವು ಒಡ್ಡು ನಿರ್ಮಿಸಲು ಮುಂದಾಗಿರುವುದಕ್ಕೆ ರಾಜ್ಯ ಕೈಗೊಂಡಿರುವ ನಿಲುವನ್ನು ಕಾಂಗ್ರೆಸ್ ಶಾಸಕ ಬಿರಾಜಿತ್ ಸಿನ್ಹಾ ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ, ಸಾಹಾ ಉತ್ತರಿಸಿದರು.
'ರಂಗೋಟಿ ಬಳಿ ಭಾರತವು 40 ವರ್ಷಗಳ ಹಿಂದೆ ಒಡ್ಡು ನಿರ್ಮಿಸಿತ್ತು. ಇದೀಗ ಕೈಲಾಶ್‌ಹರ್ ಬಳಿ ಬಾಂಗ್ಲಾದೇಶವು ಬೃಹತ್ ಒಡ್ಡು ನಿರ್ಮಾಣಕ್ಕೆ ಮುಂದಾಗಿದೆ. ತ್ವರಿತಗತಿಯಲ್ಲಿ ಒಡ್ಡು ನಿರ್ಮಿಸಿದರೆ ಗುಣಮಟ್ಟ ಉತ್ತಮವಾಗಿರದು. ಪ್ರವಾಹ ಉಂಟಾದರೆ ಜನರು ಸಂಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಸಿನ್ಹಾ ಹೇಳಿದರು.
ಮೀನುಗಾರಿಕೆ ಸಚಿವ ಸುಧಾಂಶು ದಾಸ್ ಮಾತನಾಡಿ, 'ಇದು ಅಂತರರಾಷ್ಟ್ರೀಯ ವಿಷಯವಾಗಿದೆ. ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ಇನ್ನೂ ಕೆಲ ಭಾಗಗಳಲ್ಲಿ ಗಡಿ ಬೇಲಿ ನಿರ್ಮಾಣ ಆಗಿಲ್ಲ. ಇದರಿಂದ ಗಡಿ ಪ್ರದೇಶಗಳಲ್ಲಿ ಜಾನುವಾರು ಕಳ್ಳತನ ವ್ಯಾಪಕವಾಗಿದೆ. ಇದೀಗ ಬಾಂಗ್ಲಾವು ಒಡ್ಡು ನಿರ್ಮಿಸಲು ಮುಂದಾಗಿದೆ. ಸದೃಢ ಒಡ್ಡು ನಿರ್ಮಾಣವಾಗಬೇಕು. ಈ ವಿಷಯವನ್ನು ಕೇಂದ್ರದ ಗಮನಕ್ಕೆ ತರಲಾಗುವುದು' ಎಂದರು.
'ಬಾಂಗ್ಲಾದೇಶ ಗಡಿಯಲ್ಲಿ ಒಡ್ಡು ನಿರ್ಮಿಸಿದರೆ, ಪ್ರವಾಹ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗಲಿದೆ. ಮಳೆಗಾಲದಲ್ಲಿ ಕೈಲಾಶ್‌ಹರ್‌ನ ಕೆಳಭಾಗದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಉನಕೋಟಿ ಜಿಲ್ಲಾಧಿಕಾರಿ ಡಿ.ಕೆ. ಚಾಕ್ಮಾ ತಿಳಿಸಿದ್ದಾರೆ.





