HEALTH TIPS

ಚೈಲ್ಡಿಶ್ ಗವರ್ನರ್ ಎಂದಿದ್ದಕ್ಕೆ CM ಮೇಲೆ ಕೆರಳಿ ಕೆಂಡವಾದ ತಮಿಳುನಾಡು ರಾಜ್ಯಪಾಲ!

 ಚೆನ್ನೈ: ತಮಿಳುನಾಡು ರಾಜ್ಯಪಾಲರು ಅಧಿವೇಶನದ ಪ್ರಯುಕ್ತ ಸದನದೊಳಗೆ ಬಂದು ಭಾಷಣ ಮಾಡದೇ ನಿರ್ಗಮಿಸಿರುವ ಕುರಿತಂತೆ ರಾಜಭವನ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನಡುವೆ ವಾಗ್ಬಾಣಗಳು ಮುಂದುವರೆದಿವೆ.

ಈ ಕುರಿತು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ದ ಎಂ.ಕೆ ಸ್ಟಾಲಿನ್, ಆರ್.ಎನ್.ರವಿ ಅವರು ಒಬ್ಬ 'ಚೈಲ್ಡಿಶ್' ಗವರ್ನರ್ ಎಂದು ಜರಿದಿದ್ದರು.

ಇದಕ್ಕೆ ಗರಂ ಆಗಿರುವ ರವಿ ಅವರು, ಇಂದು ರಾಜಭವನದ ಎಕ್ಸ್‌ ಖಾತೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ. 'ದೇಶಕ್ಕೆ ಹಾಗೂ ಸಂವಿಧಾನಕ್ಕೆ ಲಜ್ಜೆಗೆಟ್ಟು ಮಾಡುವ ಅವಮಾನವನ್ನು ಈ ದೇಶದ ಜನ ಸಹಿಸುವುದಿಲ್ಲ. ಜಗಳಗಂಟತನ ಒಳ್ಳೆಯದಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.

'ರಾಷ್ಟ್ರಗೀತೆಗೆ ಗೌರವ ನೀಡುವಂತೆ ಹೇಳುವವರನ್ನು ಹಾಗೂ ಸಂವಿಧಾನ ನೀಡಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವಂತೆ ಹೇಳುವವರನ್ನು ಇವರು (ಸಿಎಂ) ಚೈಲ್ಡಿಶ್ ಎಂದು ಲೆಜ್ಜೆಗೆಟ್ಟು ಮಾತನಾಡುತ್ತಾರೆ. ಇವರು ಒಕ್ಕೂಟದ ಧ್ಯೇಯೋದ್ದೇಶಗಳಿಗೆ ಗೌರವ ನೀಡುವುದಿಲ್ಲ, ಭಾರತ ಒಂದು ರಾಷ್ಟ್ರ ಎಂದು ಒಪ್ಪಿಕೊಳ್ಳುವುದಿಲ್ಲ ಹಾಗೂ ಸಂವಿಧಾನಕ್ಕೆ ಗೌರವವನ್ನೂ ನೀಡುವುದಿಲ್ಲ' ಎಂದಿದ್ದಾರೆ.

'ದಯವಿಟ್ಟು ನೆನಪಿನಲ್ಲಿಡಿ, ಭಾರತ ಮಾತೆಯೇ ನಮಗೆ ಸರ್ವಸ್ವ ಹಾಗೂ ಆ ಮಾತೆಯ ಮಕ್ಕಳಾದ ನಮಗೆಲ್ಲ ಸಂವಿಧಾನವೇ ಅತ್ಯಂತ ದೊಡ್ಡ ನಂಬಿಕೆ' ಎಂದು ಪ್ರತಿಪಾದಿಸಿದ್ದಾರೆ.

ಸ್ಟಾಲಿನ್ ಹೇಳಿದ್ದೇನು?

'ರಾಜ್ಯಪಾಲರು ತಮ್ಮ ಬಾಲಿಶ ವರ್ತನೆಯನ್ನು ಮುಂದುವರಿಸಿದರೆ ಮತ್ತು ಸದನವನ್ನು ಉದ್ದೇಶಿಸಿ ಮಾತನಾಡದಿದ್ದರೆ ಅವರು ತಮಿಳುನಾಡಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಹಿಸುತ್ತಿಲ್ಲ ಎಂದರ್ಥ' ಎಂದು ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಹೇಳಿದ್ದರು.

'ನಾನು ಸಾಮಾನ್ಯ ವ್ಯಕ್ತಿಯಾಗಿರಬಹುದು. ಆದರೆ ಈ ಸದನಕ್ಕೆ ಶತಮಾನಗಳ ಇತಿಹಾಸವಿದೆ ಮತ್ತು ಕೋಟ್ಯಂತರ ಜನರ ಭಾಗವಿಸುವಿಕೆಯಿಂದ ಅಸ್ತಿತ್ವಕ್ಕೆ ಬಂದಿದೆ. ರಾಜ್ಯಪಾಲರು ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಕ್ಕೆ ಮತ್ತು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಗಳಿಗೆ ರಾಜಕೀಯ ಉದ್ದೇಶದಿಂದ ಅಗೌರವ ತೋರುವುದಕ್ಕೆ ವಿಧಾನಸಭೆ ಸಾಕ್ಷಿಯಾಗಿರಲಿಲ್ಲ. ಮುಂದೆಂದೂ ಇಂತಹ ವಿದ್ಯಮಾನ ಮರುಕಳಿಸದಿರಲಿ' ಎಂದು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries