HEALTH TIPS

ಐತಿಹಾಸಿಕ ಮೈಲಿಗಲ್ಲಿನತ್ತ ISRO; SpaDeX ಜೋಡಣೆ, ಉಪಗ್ರಹಗಳು 3 ಮೀ. ಸನಿಹಕ್ಕೆ!

ನವದೆಹಲಿ: ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನತ್ತ ದಾಪುಗಾಲಿರಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮಹತ್ವಾಕಾಂಕ್ಷಿ SpaDeX ಉಪಗ್ರಹಗಳ ಜೋಡಣೆಗೆ ಮತ್ತಷ್ಟು ಸನ್ನಿಹಿತವಾಗಿದೆ.

ಹೌದು.. ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯೋಗಕ್ಕಾಗಿ ಉಡಾವಣೆ ಮಾಡಲಾಗಿರುವ ಎರಡು ಉಪಗ್ರಹಗಳನ್ನು ಮೂರು ಮೀಟರ್‌ ಅಂತರಕ್ಕೆ ತಂದು ಜೋಡಣೆಯ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ಬಳಿಕ, ಸುರಕ್ಷಿತವಾಗಿ ಹಿಂದಕ್ಕೆ ಸರಿಸಲಾಗಿದೆ. ಕಾರ್ಯಾಚರಣೆಯ ದತ್ತಾಂಶಗಳನ್ನು ಮತ್ತಷ್ಟು ವಿಶ್ಲೇಷಿಸಿದ ನಂತರ ಡಾಕಿಂಗ್(ಜೋಡಣೆ) ಪ್ರಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಇಸ್ರೊ ಭಾನುವಾರ ತಿಳಿಸಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಇಸ್ರೋ, 'ಮೂರು ಮೀಟರ್‌ಗಳವರೆಗೆ ತಲುಪುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗಿದೆ. ಬಳಿಕ, ಬಾಹ್ಯಾಕಾಶ ನೌಕೆಗಳನ್ನು ಸುರಕ್ಷಿತ ದೂರದಲ್ಲಿ ಹಿಂದಕ್ಕೆ ಸರಿಸಲಾಗಿದೆ. ಕಾರ್ಯಾಚರಣೆಯ ದತ್ತಾಂಶವನ್ನು ಮತ್ತಷ್ಟು ವಿಶ್ಲೇಷಿಸಿದ ನಂತರ ಡಾಕಿಂಗ್ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಜೋಡಣೆ ಮಾಡುವ ಪ್ರಯೋಗವು, ಕಡಿಮೆ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮಿಷನ್ ಆಗಿದೆ.

ಸ್ಪೇಸ್ ಡಾಕಿಂಗ್ ಪ್ರಯೋಗಕ್ಕೆ (ಸ್ಪೇಡೆಕ್ಸ್) ಎರಡು ಘೋಷಿತ ವೇಳಾಪಟ್ಟಿ( ಜನವರಿ 7 ಮತ್ತು ಜನವರಿ 9) ಮೀರಿ ಈಗ ಜೋಡಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಡಿಸೆಂಬರ್ 30ರಂದು ಆರಂಭವಾದ ಈ ಮಿಷನ್ ಅಡಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್(ಜೋಡಣೆ) ಗುರಿಯನ್ನು ಹೊಂದಲಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 220 ಕೆ.ಜಿ ತೂಕದ ಎರಡು ಉಪಗ್ರಹಗಳನ್ನು ಹೊತ್ತೊಯ್ದಿದ್ದ ಪಿಎಸ್‌ಎಲ್‌ವಿ ಸಿ 60 ರಾಕೆಟ್, 475 ಕಿ. ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿದೆ. ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳ ಅಗತ್ಯವಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ ಎಂದು ಇಸ್ರೊ ಹೇಳಿದೆ.

ಯೋಜನೆಯ ಉದ್ದೇಶ

ಸ್ಪಾಡೆಕ್ಸ್​​ ಮಿಷನ್‌ನ ಪ್ರಾಥಮಿಕ ಉದ್ದೇಶವು ಕಡಿಮೆ ಅಂತರದ ಭೂಮಿಯ ವೃತ್ತಾಕಾರದ ಕಕ್ಷೆಯಲ್ಲಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳ (SDX01 - ಚೇಸರ್ ಮತ್ತು SDX02 - ಟಾರ್ಗೆಟ್) ಸಂಧಿಸುವಿಕೆ, ಡಾಕಿಂಗ್ ಮತ್ತು ಅನ್‌ಡಾಕಿಂಗ್‌ಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶನ ತೋರುವುದಾಗಿದೆ. ಡಾಕ್ ಮಾಡಿದ ಬಾಹ್ಯಾಕಾಶ ನೌಕೆಯ ನಡುವೆ ವಿದ್ಯುತ್ ಶಕ್ತಿಯ ವರ್ಗಾವಣೆಯಾಗುತ್ತದೆಯೇ ಎಂಬುದನ್ನು ಕಂಡುಕೊಳ್ಳುವ ಉದ್ದೇಶವನ್ನೂ ಇದು ಹೊಂದಿದೆ. ಬಾಹ್ಯಾಕಾಶದಲ್ಲಿ ರೋಬೋಟಿಕ್ಸ್, ಸಂಯೋಜಿತ ಬಾಹ್ಯಾಕಾಶ ನೌಕೆ ನಿಯಂತ್ರಣ ಮತ್ತು ಅನ್‌ಡಾಕ್ ಮಾಡಿದ ನಂತರ ಪೇಲೋಡ್ ಕಾರ್ಯಾಚರಣೆಗಳಂತಹ ಭವಿಷ್ಯದ ಯೋಜನೆಗಳಿಗೆ ಇದು ಅಗತ್ಯವಾಗಿದೆ.

ಐತಿಹಾಸಿಕ ಸಾಧನೆ

ಇನ್ನು ‘ಸ್ಪೇಡೆಕ್ಸ್‌’ ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ. ಒಂದೇ ತರನಾದ ಮಿಷನ್​ಗಳ ಗುರಿ ಸಾಧನೆಗೆ ಬಹು ರಾಕೆಟ್​ಗಳನ್ನು ಉಡಾವಣೆ ಮಾಡಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನ ಅತ್ಯಗತ್ಯವಾಗಿರುತ್ತದೆ. ಈ ಮಿಷನ್ ಮೂಲಕ ಭಾರತವು ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗುವತ್ತ ಸಾಗುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries