ಮಹಾಕುಂಭ ನಗರ: ಪ್ರಯಾಗ್‌ರಾಜ್‌ನ ಗಂಗಾನದಿ ದಡದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾನುವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಡೇರೆಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
'ಮಹಾಕುಂಭ ಮೇಳದ ವ್ಯಾಪ್ತಿಯಲ್ಲಿರುವ ವಲಯ 19ರ ಗೀತಾ ಪ್ರೆಸ್ ಶಿಬಿರದಲ್ಲಿ ಭಾನುವಾರ ಸಂಜೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಶಿಬಿರದಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ. ಬಲವಾಗಿ ಗಾಳಿ ಬೀಸುತ್ತಿದ್ದ ಕಾರಣ ಕೆಲವೇ ಕ್ಷಣಗಳಲ್ಲಿ ಬೆಂಕಿಯು ಸಮೀಪದ ಡೇರೆಗಳಿಗೂ ವ್ಯಾಪಿಸಿದೆ.
ಪ್ರಯಾಗ್‌ರಾಜ್‌ನಿಂದ ಝೂಸೀಗೆ ಸಂಪರ್ಕ ಕಲ್ಪಿಸುವ ಶಾಸ್ತ್ರಿ ಸೇತುವೆ ಸಮೀಪದಲ್ಲಿರುವ ಡೇರೆಗಳಿಂದ ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಏಳುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ ಬೆಳಿಗ್ಗೆ ಮಹಾಕುಂಭಕ್ಕೆ ಭೇಟಿ ನೀಡಿದ್ದರಲ್ಲದೆ, ಇಡೀ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಬೆಂಕಿ ಅವಘಡದ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಬೆಂಕಿಯು ಡೇರೆಗಳಿಗೆ ಹಬ್ಬುತ್ತಿದ್ದಂತೆಯೇ ಅಡುಗೆ ಅನಿಲ ಸಿಲಿಂಡರ್‌ಗಳು ಸ್ಫೋಟಿಸುವ ಸದ್ದು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ ಅವರಿಗೆ ಕರೆ ಮಾಡಿ ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.




