ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದು (ಶುಕ್ರವಾರ) ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು (ಲೋಕಸಭೆ, ರಾಜ್ಯಸಭೆ) ಉದ್ದೇಶಿಸಿ ಭಾಷಣ ಮಾಡಿದರು. ಮುರ್ಮು ಅವರು ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 'poor thing' ಎಂದು ಹೇಳಿದ್ದಾರೆ.
ಸೋನಿಯಾ ಅವರು ರಾಷ್ಟ್ರಪತಿ ಅವರನ್ನು 'poor thing' ಎಂದು ಕರೆದಿದ್ದಾರೆ. ಇದು ಅವರ ಊಳಿಗಮಾನ್ಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಕಿಡಿಕಾರಿದೆ.
ಸೋನಿಯಾ ಹೇಳಿದ್ದೇನು?
ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಅವರ ಭಾಷಣ ಮುಗಿದ ಬಳಿಕ ಹೊರ ಬಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮಾಧ್ಯಮ ಪ್ರತಿನಿಧಿಗಳು, ರಾಷ್ಡ್ರಪತಿ ಭಾಷಣದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ, ಭಾಷಣ ಓದಿ ಮುಗಿಸುವ ಹೊತ್ತಿಗೆ ಅವರು ಸುಸ್ತಾಗಿದ್ದರು. ಅವರಿಗೆ ಮಾತನಾಡುವುದೇ ಕಷ್ಟವಾಗಿತ್ತು. 'poor thing' ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ಸೋನಿಯಾ ಗಾಂಧಿ ಅವರು ಮುರ್ಮು ಅವರನ್ನು 'poor thing' ಎಂದು ಕರೆಯುವ ಮೂಲಕ ದೇಶದ ಅತ್ಯುನ್ನತ ಹುದ್ದೆಯನ್ನು ಅವಮಾನಿಸಿದ್ದಾರೆ. ಇದು ಅವರ ಊಳಿಗಮಾನ್ಯ ಮನಸ್ಥಿತಿಯ ಪ್ರತೀಕ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆಯನ್ನು ಕಾಂಗ್ರೆಸ್ ಅವಮಾನಿಸಿರುವುದು ಇದು ಮೊದಲ ಬಾರಿಯೇನಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೇಷರತ್ ಕ್ಷಮೆಗೆ ನಡ್ಡಾ ಆಗ್ರಹ
ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವುದು ಕಾಂಗ್ರೆಸ್‌ಗೆ ಹಳೆಯ ಚಾಳಿ. ಕೂಡಲೇ ಅವರು ರಾಷ್ಟ್ರಪತಿ ಹಾಗೂ ದೇಶದ ಬುಡಕಟ್ಟು ಸಮುದಾಯಗಳ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗ್ರಹಿಸಿದ್ದಾರೆ.




