ವಾಷಿಂಗ್ಟನ್: ಕೆಲಸದ ಸಮಯದ ಚರ್ಚೆಗೆ ಹೊಸದಾಗಿ ಸೇರ್ಪಡೆಯಾಗಿರುವ ಖ್ಯಾತ ಉದ್ಯಮಿ ಇಲಾನ್ ಮಸ್ಕ್, ತಮ್ಮ ನೇತೃತ್ವದ ಶ್ವೇತಭವನದ ಸರ್ಕಾರಿ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉದ್ಯೋಗಿಗಳು ವಾರದಲ್ಲಿ 120 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಡಿಒಜಿಇ ವಾರಕ್ಕೆ 120 ಗಂಟೆ ಕೆಲಸ ಮಾಡುತ್ತಿದೆ. ನಮ್ಮ ಇತರೆ ಇಲಾಖೆಯ ವಿರೋಧಿಗಳು ವಾರಕ್ಕೆ 40 ಗಂಟೆಗಳ ಕಾಲ ಆಶಾವಾದಿಯಾಗಿ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಅವರು ತುಂಬಾ ವೇಗವಾಗಿ ಸೋಲುತ್ತಿದ್ದಾರೆ' ಎಂದು ಟೆಸ್ಲಾ ಮುಖ್ಯಸ್ಥ ಮಸ್ಕ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
'ಅಧಿಕಾರಶಾಹಿಗಳಲ್ಲಿ ಕೆಲವೇ ಕೆಲವರು ವಾರಾಂತ್ಯದಲ್ಲಿ ಕೆಲಸ ಮಾಡುತ್ತಾರೆ. ಎದುರಾಳಿಗಳ ತಂಡವು 2 ದಿನ ಕೆಲಸದಿಂದ ಹೊರಗಿರುತ್ತದೆ ' ಎಂದು ಹೇಳುವ ಮೂಲಕ ವೀಕೆಂಡ್ ರಜೆ ತೆಗೆದುಕೊಳ್ಳುವ ಸರ್ಕಾರಿ ಅಧಿಕಾರಿಗಳನ್ನು ಟೀಕಿಸಿರುವ ಅವರು, ವಾರಾಂತ್ಯದಲ್ಲಿ ಕೆಲಸ ಮಾಡುವುದನ್ನು ಸೂಪರ್ ಪವರ್ ಎಂದು ಕರೆದಿದ್ದಾರೆ.
ಇಬ್ಬರು ಭಾರತೀಯ ಉದ್ಯಮಿಗಳು ವಾರದಲ್ಲಿ ದೀರ್ಘಾವಧಿಯ ಕೆಲಸವನ್ನು ಪ್ರತಿಪಾದಿಸಿದ್ದಕ್ಕಾಗಿ ಕಟು ಟೀಕೆ ಎದುರಿಸಿದ ಬೆನ್ನಲ್ಲೇ ಮಸ್ಕ್ ಹೇಳಿಕೆ ಹೊರಬಿದ್ದಿದೆ. ಎಲ್ & ಟಿ ಅಧ್ಯಕ್ಷ ಎಸ್. ಎನ್. ಸುಬ್ರಹ್ಮಣ್ಯನ್ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಈ ಹಿಂದೆ ಕ್ರಮವಾಗಿ ವಾರಕ್ಕೆ 90 ಗಂಟೆ ಮತ್ತು 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದ್ದರು. ಬಳಿಕ, ತಮ್ಮ ಪ್ರತಿಪಾದನೆಗೆ ವಿವರಣೆ ನೀಡಿದ್ದರು.




