ಚೆನ್ನೈ: 13 ವರ್ಷದ ವಿದ್ಯಾರ್ಥಿನಿಯೊಬ್ಬರಿಗೆ ಮೂವರು ಶಿಕ್ಷಕರು ಶೌಚಾಲಯದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಚೆನ್ನೈನ ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿದ್ದು, ಬಳಿಕ ಮೂವರನ್ನು ಬಂಧಿಸಲಾಗಿದೆ.
ಜನವರಿ 2ರಂದು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ವಿದ್ಯಾರ್ಥಿನಿಯು ಜನವರಿ 5ರಿಂದ ಶಾಲೆಗೆ ಗೈರಾಗಿರುವುದಕ್ಕೆ ಕಾರಣ ತಿಳಿದುಕೊಳ್ಳಲು ಮುಖ್ಯಶಿಕ್ಷಕರು ಅವರ ಮನೆಗೆ ತೆರಳಿದಾಗ ಘಟನೆಯ ಬಗ್ಗೆ ಗೊತ್ತಾಗಿದೆ.
ಹೊಟ್ಟೆನೋವಿನ ಕಾರಣಕ್ಕೆ ವಿದ್ಯಾರ್ಥಿನಿಯು ಗೈರಾಗುತ್ತಿರುವುದಾಗಿ ಪೋಷಕರು ಆರಂಭದಲ್ಲಿ ತಿಳಿಸಿದ್ದರು. ಆದರೆ ಮುಖ್ಯಶಿಕ್ಷಕರ ಒತ್ತಾಯದ ಬಳಿಕ ನಡೆದ ಘಟನೆಯನ್ನು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಶಿಕ್ಷಕರು ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಅದರ ಅನ್ವಯ ಮೂವರು ಶಿಕ್ಷಕರ ವಿರುದ್ಧ ಬರ್ಗೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





