ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 'ಶೂನ್ಯ ಒಳನುಸುಳುವಿಕೆ' ಗುರಿಯೊಂದಿಗೆ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಭದ್ರತಾ ಪಡೆಗಳಿಗೆ ಸೂಚನೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸ್ಥಿತಿಗತಿ ಕುರಿತ ಉನ್ನತಮಟ್ಟದ ಪರಿಶೀಲನಾ ಸಭೆಗಳಲ್ಲಿ ಭಾಗಿಯಾಗಿ ಮಾತನಾಡಿದ ಅವರು, 'ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರಂತರ ಕ್ರಮಗಳಿಂದಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಜಾಲವು ದುರ್ಬಲಗೊಂಡಿದೆ' ಎಂದು ಅಭಿಪ್ರಾಯಪಟ್ಟರು.
'ಅಸ್ತಿತ್ವದಲ್ಲಿರುವ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕುವುದು ನಮ್ಮ ಗುರಿ' ಎಂದು ಅವರು ಹೇಳಿದರು.
ಮಂಗಳವಾರ ಮತ್ತು ಬುಧವಾರ ನಡೆದ ಸಭೆಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ ಮೋಹನ್, ಗುಪ್ತಚರ ದಳದ ನಿರ್ದೇಶಕ ತಪನ್ ದೇಕಾ, ಡಿಜಿಪಿ ನಳಿನ್ ಪ್ರಭಾತ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೇರಿದಂತೆ ಸೇನೆ, ಪೊಲೀಸ್, ಅರೆಸೇನಾಪಡೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.





