ನವದೆಹಲಿ: ಪಾಕಿಸ್ತಾನದಲ್ಲಿರುವ ಎಫ್-16 ಯುದ್ಧ ವಿಮಾನಗಳ ನಿರ್ವಹಣೆಗೆ ಅಮೆರಿಕವು 39.7 ಕೋಟಿ ಡಾಲರ್ (ಅಂದಾಜು ₹ 3,460 ಕೋಟಿ) ಮೀಸಲಿಟ್ಟಿರುವ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನರೇಂದ್ರ ಮೋದಿ ಸರ್ಕಾರದ ರಾಜತಾಂತ್ರಿಕ ಕಾರ್ಯತಂತ್ರವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಭಾರತದ ವಿದೇಶಾಂಗ ನೀತಿಯ ಮರುಪರಿಶೀಲನೆಗೆ ಕರೆ ನೀಡಿದೆ.
'ಪಾಕಿಸ್ತಾನದ ಬಳಿಯಿರುವ ಯುದ್ಧ ವಿಮಾನಗಳ ನಿರ್ವಹಣೆಗೆ ದೊಡ್ಡ ಮೊತ್ತ ಮೀಸಲಿಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ನಿರ್ಧಾರವು ಮೋದಿ ಸರ್ಕಾರದ ರಾಜತಾಂತ್ರಿಕ ನೀತಿಗಳ ಪರಿಣಾಮಕಾರಿತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ' ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಂಗಳವಾರ ಹೇಳಿದ್ದಾರೆ.
'ಟ್ರಂಪ್ ಸರ್ಕಾರದ ನಿರ್ಧಾರವು ಹಿಂದಿನ ಬೈಡನ್ ಆಡಳಿತವು ಇದೇ ಉದ್ದೇಶಕ್ಕಾಗಿ ಪಾಕಿಸ್ತಾನಕ್ಕೆ 45 ಕೋಟಿ ಡಾಲರ್ ಪ್ಯಾಕೇಜ್ ನೀಡಿರುವುದನ್ನು ನೆನಪಿಸುತ್ತದೆ ಮತ್ತು ಪಾಕ್‌ಗೆ ಅಮೆರಿಕದ ಮಿಲಿಟರಿ ಬೆಂಬಲವನ್ನು ಎತ್ತಿ ತೋರಿಸುತ್ತದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕವು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಅಥವಾ ಆಡಳಿತಾರೂಢ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




