ನವದೆಹಲಿ: ಸಂಸತ್ ಅಥವಾ ಶಾಸನಸಭೆಗಳಲ್ಲಿ ಆಕ್ರಮಣಶೀಲತೆ ಮತ್ತು ಅಸಭ್ಯತೆಗೆ ಅವಕಾಶವಿಲ್ಲ. ಸದಸ್ಯರು ಪರಸ್ಪರ ಗೌರವದಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಸದನದಲ್ಲಿ ಮಾತನಾಡಲು ದೊರೆಯುವ ಹಕ್ಕನ್ನು ಸಹ ಸದಸ್ಯರು, ಸಚಿವರು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸ್ಪೀಕರ್/ ಸಭಾಧ್ಯಕ್ಷರನ್ನು ಅವಮಾನಿಸುವ ಸಾಧನವಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದೆ.
ಬಿಹಾರ ವಿಧಾನಪರಿಷತ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಹೇಳಿಕೆ ನೀಡಿದೆ.
ಬಿಹಾರ ವಿಧಾನಪರಿಷತ್‌ನಲ್ಲಿ ಆರ್‌ಜೆಡಿ ಸದಸ್ಯ ಸುನಿಲ್ ಕುಮಾರ್ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಘೋಷಣೆ ಕೂಗಿದ ನಡವಳಿಕೆಯನ್ನು 'ಒಪ್ಪಲಾಗದು' ಎಂದು ಪೀಠವು ಹೇಳಿತು. ಆದರೆ ಅವರನ್ನು ಸದನದಿಂದ ಉಚ್ಚಾಟಿಸಿರುವ ಕ್ರಮವನ್ನು 'ಕಠಿಣ ಮತ್ತು ವಿಪರೀತ' ಎಂದು ಹೇಳಿ ರದ್ದುಗೊಳಿಸಿತು.
'ಸದಸ್ಯರ ಉತ್ತಮ ನಡವಳಿಕೆಯು ಕೇವಲ ಸಂಪ್ರದಾಯದ ಪಾಲನೆ ಅಥವಾ ಔಪಚಾರಿಕತೆಯ ವಿಷಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಇದು ಅತ್ಯಗತ್ಯ' ಎಂದು ಪೀಠವು ಅಭಿಪ್ರಾಯಪಟ್ಟಿತು.
ಸದನದಲ್ಲಿ ಅಶಿಸ್ತಿನ ವರ್ತನೆಗಾಗಿ ಸಿಂಗ್ ಅವರನ್ನು 2024ರ ಜುಲೈ 26 ರಂದು ಬಿಹಾರ ವಿಧಾನ ಪರಿಷತ್‌ನಿಂದ ಹೊರಹಾಕಲಾಗಿತ್ತು.




