ಕುಂಬಳೆ: ಜಿಲ್ಲೆಯ ಬುಡಕಟ್ಟು ಗುಂಪಾದ ಕೊರಗ ಕುಟುಂಬವು, ಭೂಮಿಯನ್ನು ಹೊಂದಿದ್ದರೂ, ಅದು ತಮ್ಮದೇ ಎಂದು ಸಾಬೀತುಪಡಿಸಲು ಒಂದೇ ಒಂದು ದಾಖಲೆಯೂ ಹೊಂದದಿರುವುದು ಕಳವಳಕಾರಿಯಾಗಿದೆ. ಭೂಮಿಯ ಹಕ್ಕುಪತ್ರದ ಕೊರತೆಯಿಂದಾಗಿ ವಸತಿ ಯೋಜನೆಗಳು ಮತ್ತು ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತಗೊಳ್ಳುತ್ತಿರುವ ಬುಡಕಟ್ಟು ಸಮುದಾಯಕ್ಕೆ ಈಗ ಪರಿಹಾರ ನೀಡುವ ಕಾರ್ಯಚಟುವಟಿಕೆಗಳು ಇದೀಗ ಚಾಲನೆಗೊಳ್ಳುತ್ತಿದೆ. ಕೃಷಿ ಮಾಡಲು ಮನೆಯಿಲ್ಲ, ಜಮೀನಿಲ್ಲ, ಮತ್ತು ಅವರ ಬಳಿ ಏನಿದ್ದರೂ, ಅವರ ಬಳಿ ಕಾನೂನು ದಾಖಲೆಗಳಿಲ್ಲ. ಕಾಸರಗೋಡು ಜಿಲ್ಲೆಯ ಈ ಬುಡಕಟ್ಟು ಸಮುದಾಯವು ಬಹಳ ಸಮಯದಿಂದ ಎದುರಿಸುತ್ತಿದ್ದ ಅತಿದೊಡ್ಡ ಬಿಕ್ಕಟ್ಟು ಇದಾಗಿತ್ತು. ಆದರೆ, ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಬದಿಯಡ್ಕದ ಪೆರಡಾಲದ ಉನ್ನತಿಗೆ(ಕಾಲನಿ)ಇತ್ತೀಚೆಗೆ ನೀಡಿದ ಭೇಟಿಯ ಬಳಿಕ ಬದಲಾವಣೆ ಪ್ರಾರಂಭವಾಯಿತು.
(ಆಪರೇಷನ್ ಸ್ಮೈಲ್ ಯೋಜನೆಯ ಭಾಗವಾಗಿ ಮಧೂರು ಪಂಚಾಯತಿಯ ಪುಳ್ಕೂರು ಉನ್ನತಿಯಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಲಾಯಿತು.)ಅವರ ಕಷ್ಟವನ್ನು ಕಂಡ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಜಂಟಿ ಆಶ್ರಯದಲ್ಲಿ 'ಆಪರೇಷನ್ ಸ್ಮೈಲ್' ಯೋಜನೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಿದರು. ಅದರ ಆಧಾರದ ಮೇಲೆ, ಕಳೆದ ತಿಂಗಳು, ಕಂದಾಯ ಸಚಿವ ಕೆ. ರಾಜನ್ ಈ ಭವ್ಯ ಯೋಜನೆಯನ್ನು ಪ್ರಾರಂಭಿಸಿದರು. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಓ.ಆರ್. ಕೇಳು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಹಾಗೂ ಮಂಜೇಶ್ವರ ತಾಲ್ಲೂಕುಗಳಲ್ಲಿರುವ 59 ಕಾಲೋನಿಗಳಲ್ಲಿ ಹರಡಿರುವ 478 ಎಕರೆ ಭೂಮಿಯ ಗಡಿಗಳನ್ನು ಅಳತೆ ಮಾಡಿ ಗುರುತಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಯೋಜನೆಯ ಭಾಗವಾಗಿ, ಇಲ್ಲಿಯವರೆಗೆ 213 ಕುಟುಂಬಗಳ ಭೂಮಿಯನ್ನು ಅಳತೆ ಮಾಡಿ ದಾಖಲಿಸಲಾಗಿದೆ. ಸರ್ಕಾರದ ಡಿಜಿಟಲ್ ಸಮೀಕ್ಷೆಯ ಭಾಗವಾಗಿ ಎಂಟು ಕಾಲನಿಗಳ ಭೂಮಿಯನ್ನು ಅಳತೆ ಮಾಡಿ ನಕ್ಷೆ ಮಾಡಲಾಗಿದೆ. ಮಾರ್ಚ್ ಮೊದಲ ವಾರದೊಳಗೆ ಎಲ್ಲಾ ಯೋಜನಾ ಚಟುವಟಿಕೆಗಳು ಪೂರ್ಣಗೊಳ್ಳುವ ಅಂದಾಜಿದೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ 539 ಕುಟುಂಬಗಳಲ್ಲಿ ಸುಮಾರು 1,706 ಕೊರಗ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. "ಆಪರೇಷನ್ ಸ್ಮೈಲ್ ನ ಪ್ರಯೋಜನವೆಂದರೆ ಭೂ ಮಾಲೀಕತ್ವವನ್ನು ಪಡೆದುಕೊಂಡ ನಂತರ, ವಸತಿ ಯೋಜನೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಸವಲತ್ತುಗಳು ಪಡೆಯುವಲ್ಲಿ ನ್ಯಾಯ ದೊರಕಲಿದೆ".
ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅವರ ಮೇಲ್ವಿಚಾರಣೆಯಲ್ಲಿ, ಸರ್ವೇ ಸಹಾಯಕ ನಿರ್ದೇಶಕ ಆಸಿಫ್ ಅಲಿಯಾರ್ ಮತ್ತು ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಕೆ. ಮೋಹನದಾಸ್, ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ವಿ. ರಾಘವನ್ ಅವರು ಯೋಜನೆಯ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳು, ತಹಶೀಲ್ದಾರರು, ಗ್ರಾಮ ಅಧಿಕಾರಿಗಳು, ಗ್ರಾಮದ ಹಿರಿಯರು, ಸಮಾಜ ಸೇವಕರು ಮುಂತಾದವರ ಸಹಕಾರದೊಂದಿಗೆ ಈ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆ ಪೂರ್ಣಗೊಳ್ಳುವುದರೊಂದಿಗೆ, ಈ ಬುಡಕಟ್ಟು ಸಮುದಾಯವು ವರ್ಷಗಳಿಂದ ಎದುರಿಸುತ್ತಿರುವ ಭೂ ಬಿಕ್ಕಟ್ಟು ಕೊನೆಗೊಳ್ಳುತ್ತದೆ ಮತ್ತು ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

.jpg)

