ಛತರ್‌ಪುರ: ಮಧ್ಯಪ್ರದೇಶದಲ್ಲಿ ನಡೆದ 51ನೇ ಖಜುರಾಹೊ ನೃತ್ಯೋತ್ಸವದಲ್ಲಿ 139 ಕಲಾವಿದರು 24 ಗಂಟೆಗಳ ಕಾಲ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಸುದೀರ್ಘ ಅವಧಿಯ ಶಾಸ್ತ್ರೀಯ ನೃತ್ಯ ಎಂಬ ದಾಖಲೆ ಬರೆದಿದೆ.
ಕಲಾವಿದರು, ಬುಧವಾರ ಮಧ್ಯಾಹ್ನ 2.34ರಿಂದ ಗುರುವಾರ ಮಧ್ಯಾಹ್ನ 2.43ರವರೆಗೆ ನಿರಂತರವಾಗಿ 24 ಗಂಟೆ, 9 ನಿಮಿಷ, 6 ಸೆಕೆಂಡ್ ನೃತ್ಯ ಮಾಡಿದ್ದಾರೆ.
ನೃತ್ಯ ಪ್ರದರ್ಶನದ ಬಳಿಕ ಗಿನ್ನಿಸ್ ತಂಡವು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಪ್ರಮಾಣಪತ್ರ ನೀಡಿತು.
ರಾಜ್ಯದ ಸಾಂಸ್ಕೃತಿಕ ಇಲಾಖೆಯು ಕಾರ್ಯಕ್ರಮ ಆಯೋಜಿಸಿತ್ತು. ಕಥಕ್, ಭರತನಾಟ್ಯ, ಕುಚಿಪುಡಿ, ಮೋಹಿನಿಅಟ್ಟಂ ಹಾಗೂ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಲಾಯಿತು.




